ಬೆಂಗಳೂರು, ಅ.07: ಜಯನಗರ ಕ್ಷೇತ್ರದಲ್ಲಿ ವೋಟರ್ ಐಡಿ (ಮತದಾರರ ಪಟ್ಟಿ) ಪರಿಶೀಲನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಎಫ್‍ಐಆರ್ ದಾಖಲಾಗಿದ್ದು, ಇದನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.
ಪ್ರಮುಖ ಮುಖಂಡರ ಭೇಟಿ ಹಾಗೂ ಆಕ್ರೋಶ
ಜಯನಗರ ಪೊಲೀಸ್ ಠಾಣೆಗೆ ತೆರಳಿದ ನಿಯೋಗವು, ಪೊಲೀಸರ ಏಕಪಕ್ಷೀಯ ಧೋರಣೆ ಮತ್ತು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಶಾಸಕ ಸಿ.ಕೆ. ರಾಮಮೂರ್ತಿ, ಗೋವಿಂದರಾಜನಗರ ಕ್ಷೇತ್ರದ ಮುಖಂಡ ಹಾಗೂ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಬೆಂಗಳೂರು ದಕ್ಷಿಣ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೃಷ್ಣ ಹಾಗೂ ಜಯನಗರ ಕ್ಷೇತ್ರದ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಫಾರ್ಮ್-7 ಸಲ್ಲಿಕೆ ವಿವಾದ
ನಕಲಿ ಹಾಗೂ ಡಬಲ್ ಎಂಟ್ರಿ ಮತದಾರರ ಹೆಸರುಗಳ ಪರಿಶೀಲನೆಗೆ ಬಿಜೆಪಿ ಕಾರ್ಯಕರ್ತರು ಕಾನೂನುಬದ್ಧವಾಗಿ ಫಾರ್ಮ್-7 ಸಲ್ಲಿಸಿದ್ದರೂ, ಅದನ್ನು ರಾಜಕೀಯ ದುರುದ್ದೇಶದಿಂದ ತಿರುಚಿ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ ಎಂದು ಮುಖಂಡರು ಆರೋಪಿಸಿದರು.
ಎಂಎಲ್‌ಸಿ ಚುನಾವಣೆಯಲ್ಲಿ ಎಸ್.ವಿ. ಸಂಕನೂರಗೆ ಹ್ಯಾಟ್ರಿಕ್ ಗೆಲುವಿನ ವಿಶ್ವಾಸ: ಬಿ.ವೈ. ವಿಜಯೇಂದ್ರ
ಚುನಾವಣಾಧಿಕಾರಿ ಹಾಗೂ ಪೊಲೀಸರ ವಿರುದ್ಧ ಅಸಮಾಧಾನ
ಗೌಪ್ಯವಾಗಿಡಬೇಕಾದ ಅರ್ಜಿಗಳನ್ನು ಕಾಂಗ್ರೆಸ್ ಕಾರ್ಯಕರ್ತರ ಕೈಗೆ ತಲುಪಿಸಿ, ತರಾತುರಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಖಂಡನೀಯ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಸುಳ್ಳು ಎಫ್‍ಐಆರ್ ಅನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.