Benami Property: ಸಿಎಂ ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಗಳಿಕೆ ಆರೋಪ; ಲೋಕಾಯುಕ್ತಕ್ಕೆ ದೂರು
Benami Property: ಬೇನಾಮಿ ಆಸ್ತಿಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಪ್ರಭಾವದಿಂದ ಅಧಿಕಾರಿಗಳು ಕಾನೂನು ನಿಯಮ ಮೀರಿ ಭೂಮಿ ಪರಭಾರೆ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಮೈಸೂರು: ಮುಡಾ ನಿವೇಶನ ಹಗರಣದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಇದೀಗ ಮತ್ತೆ ಸಿಎಂ ಕುಟುಂಬದವರ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು (Benami Property) ಸಲ್ಲಿಸಿದ್ದಾರೆ.
ಬೇನಾಮಿ ಆಸ್ತಿಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆಲನಹಳ್ಳಿ ಗ್ರಾಮದ ಸರ್ವೇ ನಂಬರ್ 113/4ರ ಒಂದು ಎಕರೆ ಜಮೀನು ಸಂಬಂಧಿಸಿದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಬೇನಾಮಿ ಆಸ್ತಿ ಗಳಿಕೆ ಆರೋಪ ಮಾಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ಗೆ ದೂರಿನ ಪತ್ರ ಸಲ್ಲಿಸಲಾಗಿದೆ.
ಮೈಸೂರು ತಾಲೂಕಿನ ಆಲನಹಳ್ಳಿ ಗ್ರಾಮದ ಸರ್ವೆ ನಂ. 113/4ರಲ್ಲಿ 1 ಎಕರೆ ಭೂಮಿಯನ್ನು 1983ರ ಡಿ.15 ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಎಂಬುವರಿಂದ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿ ಮಾಡಿದ್ದರು.
1996ರಲ್ಲಿ ಅಂತಿಮ ಅಧಿಸೂಚನೆ ಆಗಿರುವ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ ಡಿನೋಟಿಫೈ ಮಾಡಿಸಿದ್ದು, 2006 ರಲ್ಲಿ ಮಲ್ಲಿಕಾರ್ಜುನಸ್ವಾಮಿಯಿಂದ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿಸಿ ಆದೇಶ ಹೊರಡಿಸಲಾಗಿದೆ. ಅದೇ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 2010 ಅಕ್ಟೋಬರ್ 20ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ದಾನ ಮಾಡಿದ್ದಾರೆ. ಪಾರ್ವತಿ ಅವರು ಕೂಡ 2010ರ ನ.11ರಂದು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಭೂಮಿ ಬಂದ ಒಂದೇ ತಿಂಗಳಲ್ಲಿ ದಾನ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ತಮಗೆ ಬಂದ ಭೂಮಿಯನ್ನ 2011ರ ಮಾ. 23 ರಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Micro Finance: ಮೈಕ್ರೋಫೈನಾನ್ಸ್ ಹಾವಳಿ ತಡೆಯಲು ಸುಗ್ರೀವಾಜ್ಞೆ ಕರಡು ಮುಖ್ಯಮಂತ್ರಿಗೆ ರವಾನೆ
ಸರ್ಕಾರ ಸ್ವಾಧೀನ ಮಾಡಿಕೊಂಡ ಜಮೀನು ಅಷ್ಟು ಬೇಗ ಹೇಗೆ ಸ್ವಾಧೀನದಿಂದ ಕೈಬಿಡುತ್ತೆ? ಇದರಲ್ಲಿ ಸಿದ್ದರಾಮಯ್ಯ ಅವರ ಪ್ರಭಾವವಿದೆ. ಸಿದ್ದರಾಮಯ್ಯ ಪ್ರಭಾವದಿಂದ ಅಧಿಕಾರಿಗಳು ಕಾನೂನು ನಿಯಮ ಮೀರಿ ಭೂಮಿ ಪರಭಾರೆ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.