ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಪ್ರಯಾಣ ದರದ ಬೆನ್ನಲ್ಲೇ ಲಗೇಜ್ ಶುಲ್ಕವೂ ಹೆಚ್ಚಳ!

KSRTC bus luggage fares: ಬಸ್ ಪ್ರಯಾಣ ದರಗಳ ಏರಿಕೆಯ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಲಗೇಜ್ ಸಾಗಣೆ ಶುಲ್ಕವನ್ನೂ ಸಹ ಏರಿಸಿದೆ. ಈ ಹೊಸ ಪರಿಷ್ಕೃತ ದರಗಳು ಈಗಾಗಲೇ ರಾಜ್ಯಾದ್ಯಂತ ಜಾರಿಗೆ ಬಂದಿವೆ. ಇನ್ನು ನಿಗಮದ ಹೊಸ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಪ್ರಯಾಣಿಕನಿಗೆ ನಿಗದಿತ ಮಿತಿಯವರೆಗೆ ಮಾತ್ರ ಸಾಮಗ್ರಿಗಳನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ.

ಬೆಂಗಳೂರು: ಸಾರಿಗೆ ಬಸ್‌ ಪ್ರಯಾಣಿಕರಿಗೆ ಪ್ರಯಾಣ ದರದ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಲಗೇಜ್ ಸಾಗಣೆ ಶುಲ್ಕವನ್ನು (KSRTC bus luggage fares: ) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ.

ನಿಗಮದ ಹೊಸ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಪ್ರಯಾಣಿಕನಿಗೆ ನಿಗದಿತ ಮಿತಿಯವರೆಗೆ ಮಾತ್ರ ಸಾಮಗ್ರಿಗಳನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ. 10 ಕೆಜಿಯಿಂದ 20 ಕೆಜಿ ತೂಕದವರೆಗಿನ ಲಗೇಜ್‌ಗೆ ಯಾವುದೇ ಶುಲ್ಕ ವಿಧಿಸದೆ ಉಚಿತ ಸಾಗಣೆಗೆ ಮುಂದುವರಿಯಲಿದೆ. ಆದರೆ, ಈ ನಿರ್ದಿಷ್ಟ ತೂಕದ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ಲಗೇಜ್‌ಗೆ ಪ್ರಯಾಣಿಕರು ಜೇಬಿನಿಂದ ದುಪ್ಪಟ್ಟು ಹಣ ತೆರಬೇಕಾಗುತ್ತದೆ.

ಪರಿಷ್ಕೃತ ಲಗೇಜ್ ದರಗಳ ವಿವರ (ಸ್ಟೇಜ್ ಆಧಾರದಲ್ಲಿ):

  • ಮೊದಲ 5 ಸ್ಟೇಜ್‌ವರೆಗೆ: ₹6 ರೂ. ಶುಲ್ಕದಿಂದ 10 ರೂ. ಏರಿಕೆ.
  • 6 ರಿಂದ 10 ಸ್ಟೇಜ್‌ಗಳಿಗೆ: 10 ರೂ.ಗಳಿಂದ 15 ರೂ.ಗೆ ಪರಿಷ್ಕರಣೆ
  • 11 ರಿಂದ 15 ಸ್ಟೇಜ್‌ಗಳಿಗೆ: 20 ರೂ.ಗಳಿಂದ 25ಕ್ಕೆ ಹೆಚ್ಚಳ

ದೂರದ ಊರುಗಳಿಗೆ ವ್ಯಾಪಾರ, ಶಿಕ್ಷಣ ಹಾಗೂ ಕೃಷಿ ಕೆಲಸಗಳಿಗಾಗಿ ಸಾಮಗ್ರಿಗಳನ್ನು ಹೊತ್ತು ಸಾಗುವ ಸಾಮಾನ್ಯ ಜನರಿಗೆ ಈ ಲಗೇಜ್ ಶುಲ್ಕ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಾಲ್ಕು ನಿಗಮಗಳ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ

ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ಎನ್‌ಡಬ್ಲ್ಯುಕೆಆರ್‌ಟಿಸಿ (NWKRTC) ಮತ್ತು ಕೆಕೆಆರ್‌ಟಿಸಿ (KKRTC) ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರವು ನ.4ರಂದು ಹೆಚ್ಚಿಸಿತ್ತು. ಕೆಎಸ್​​​ಆರ್​​​ಟಿಸಿಯಲ್ಲಿ ಟಿಕೆಟ್​​​ ದರ 9 ರೂಪಾಯಿ ಏರಿಕೆ ಆಗಿತ್ತು. ಬಿಎಂಟಿಸಿ ಬಸ್‌ಗೆ ಸ್ಟೇಜ್‌ಗೆ ಇದ್ದ 6 ರೂಪಾಯಿಯನ್ನು 10 ರೂಪಾಯಿಗೆ ಹೆಚ್ಚಿಸಲಾಗಿತ್ತು. ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚಿಸದೆ, ಸ್ಟೇಜ್‌ಗಳ ಆಧಾರದ ಮೇಲೆ ಏರಿಕೆ ಮಾಡಲಾಗಿತ್ತು.

ಬಸ್‌ ಪ್ರಯಾಣ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ (Byrathi Suresh) ಪ್ರಕಟಿಸಿದ್ದರು. 10 ವರ್ಷಗಳ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿಯಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಹಾಗೂ 2025ರಲ್ಲಿಯೂ ಪ್ರಯಾಣ ದರ ಏರಿಕೆ ಮಾಡಲಾಗಿತ್ತು ಎಂದು ತಿಳಿಸಿದ್ದರು.

ವಾಯುವಜ್ರ ಬಸ್‌ನಲ್ಲಿ ಕೊನೆಯ ಸ್ಟೇಜ್‌ಗೆ ಇದ್ದ 75 ರೂಪಾಯಿಯನ್ನು ಇದೀಗ 90 ರೂಪಾಯಿಗೆ ಏರಿಕೆ ಮಾಡಲಾಗಿದೆ. ''ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ 9 ರೂಪಾಯಿ ಹಾಗೂ ವೇಗದೂತ ಬಸ್‌ಗಳಲ್ಲಿ 18 ರೂಪಾಯಿವರೆಗೆ ದರ ಹೆಚ್ಚಿಸಲಾಗಿದೆʼʼ ಎಂದು ಬೈರತಿ ಸುರೇಶ್ ತಿಳಿಸಿದ್ದರು.

ಹವಾನಿಯಂತ್ರಿತ ವಜ್ರ ಬಸ್‌ಗಳ ಗರಿಷ್ಠ ಪ್ರಯಾಣ ದರವನ್ನು 75 ರೂಪಾಯಿಯಿಂದ 90 ರೂಪಾಯಿಗೆ ಹೆಚ್ಚಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳ ಗರಿಷ್ಠ ದರವನ್ನು 405 ರೂಪಾಯಿಯಿಂದ 425 ರೂಪಾಯಿಗೆ ಏರಿಸಲಾಗಿದೆʼʼ ಎಂದು ಮಾಹಿತಿ ನೀಡಿದ್ದರು.