ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ದಂಧೆ ಹೆಚ್ಚಳ ಹಾಗೂ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತೆರವು (ಸ್ಲಂ ಕ್ಲಿಯರೆನ್ಸ್ / ಎನ್‌ಕ್ರೋಚ್‌ಮೆಂಟ್) ವಿಚಾರಗಳ ಬಗ್ಗೆ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ರಾಜ್ಯದಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳು ವ್ಯವಸ್ಥಿತವಾಗಿ ತಯಾರಾಗಿ, ಸಾಗಣೆ ಹಾಗೂ ಮಾರಾಟವಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಡ್ರಗ್ಸ್ ಹಾವಳಿ ತಡೆಯುವಲ್ಲಿ ರಾಜ್ಯದ ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇದು ಸಣ್ಣ ಮಟ್ಟದ ಸಮಸ್ಯೆಯಲ್ಲ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಾಲ ರಾಜ್ಯಾದ್ಯಂತ ವ್ಯಾಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಪೊಲೀಸರು ಬಂದು ಕಲಬುರಗಿಯಲ್ಲಿ, ಮೈಸೂರಿನಲ್ಲಿ ದಾಳಿ ನಡೆಸುತ್ತಿರುವುದು ನಮ್ಮ ಗೃಹ ಇಲಾಖೆಯ ಅಸಮರ್ಥತೆಯನ್ನು ತೋರಿಸುತ್ತದೆ. ಮಹಾರಾಷ್ಟ್ರ ಪೊಲೀಸರಿಗೆ ಗೊತ್ತಾಗುವ ವಿಷಯ ನಮ್ಮ ಪೊಲೀಸರಿಗೆ, ಸರಕಾರಕ್ಕೆ ಗೊತ್ತಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.
ನಾರ್ಕೋಟಿಕ್ಸ್ ವಿಭಾಗದ ಕಾರ್ಯವೈಖರಿ, ಇಂಟೆಲಿಜೆನ್ಸ್ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪೋಲೀಸ್ ಠಾಣೆಗಳು ಮತ್ತು ಹುದ್ದೆಗಳು ಮಾರಾಟಕ್ಕೆ ಇಟ್ಟಂತೆ ಆಗಿವೆ. ಇದರಿಂದ ಯುವಕರ ಭವಿಷ್ಯ ಸಂಪೂರ್ಣವಾಗಿ ನಾಶವಾಗುತ್ತಿದೆ ಎಂದು ಹೇಳಿದರು.
ಜ.5ರಿಂದ ದೇಶಾದ್ಯಂತ ಮಹಾತ್ಮ ಗಾಂಧಿ ನರೇಗಾ ಉಳಿಸಿ ಅಭಿಯಾನ: ಸಿಎಂ ಸಿದ್ದರಾಮಯ್ಯ
ಪೊಲೀಸ್ ಇಲಾಖೆ, ಡಿಜಿಪಿ, ಗೃಹ ಸಚಿವರು ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ? ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಉಪ ಮುಖ್ಯಮಂತ್ರಿಗಳು ಯಾವಾಗ ಮುಖ್ಯಮಂತ್ರಿ ಕುರ್ಚಿ ಏರುತ್ತೇನೋ ಎಂದು ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಪೊಲೀಸ್ ಇಲಾಖೆ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಇಲಾಖೆಯನ್ನೇ ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ ಎಂದು ಅಶ್ವತ್ಥ್ ನಾರಾಯಣ ಆರೋಪಿಸಿದರು. ಇಂತಹ ಪರಿಸ್ಥಿತಿಯಲ್ಲಿ ಈ ಸರಕಾರದಿಂದ ನಾವು ಏನನನ್ನು ಬಯಸಬಹುದು? ಎಂದು ಪ್ರಶ್ನಿಸಿದರು.
ಆಡಳಿತದಲ್ಲಿ 50-60 ವರ್ಷದ ಅನುಭವ ಉಳ್ಳ ವ್ಯಕ್ತಿಗಳು ಕಳಪೆ ಮಟ್ಟದ ಆಡಳಿತವನ್ನು ನಡೆಸುತ್ತಿರುವುದು ಯುವಕರ ಭವಿಷ್ಯಕ್ಕೆ ಅಂಧಕಾರ ತಂದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಡ್ರಗ್ಸ್ ಮಾಫಿಯಾಗಳು ಆಡಳಿತದ ಮೇಲೆ ಪ್ರಭಾವ ಬೀರುವ ಹಂತಕ್ಕೆ ಬಂದಿವೆ ಎಂದರು.
ಇನ್ನು ಕೋಗಿಲು ಗ್ರಾಮದಲ್ಲಿ ನಡೆದ ಅಕ್ರಮ ಒತ್ತುವರಿ ತೆರವು ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದ ನಡೆ ದ್ವಂದ್ವಪೂರ್ಣವಾಗಿದೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಾಗ ಧರ್ಮದ ಆಧಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಟೀಕಿಸಿದರು.
ಕೆ.ಸಿ. ವೇಣುಗೋಪಾಲ್ ಅವರ ಟ್ವೀಟ್ ಉಲ್ಲೇಖಿಸಿ, ಇದು ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಸರ್ಕಾರ ಮಾನವೀಯತೆ ಮತ್ತು ಕಾನೂನು ಎರಡನ್ನೂ ಸಮತೋಲನವಾಗಿ ನಿರ್ವಹಿಸಲು ವಿಫಲವಾಗಿದೆ ಎಂದರು. ದಪ್ಪ ಚರ್ಮದ, ಆತ್ಮಸಾಕ್ಷಿ, ನೈತಿಕತೆ ಇಲ್ಲದ ನಾಯಕರು ಕೂಡಲೇ ರಾಜೀನಾಮೆ ಕೊಟ್ಟು ಸಮರ್ಥರಿಗೆ ಅವಕಾಶ ಮಾಡಿಕೊಡಲಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಾಯಕ, ನಿವೃತ್ತ ಐಪಿಎಸ್ ಅಧಿಕಾರಿ ಕೆ. ಭಾಸ್ಕರ್ ರಾವ್ ಅವರು, ರಾಜ್ಯದಲ್ಲಿ ಆ್ಯಂಟಿ-ಡ್ರಗ್ ಪಾಲಿಸಿ ಇಲ್ಲ, ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಿಲ್ಲ, ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಹೆಚ್ಚಿನವರು ಸುಲಭವಾಗಿ ಜಾಮೀನಿನ ಮೇಲೆ ಹೊರಬರುತ್ತಿದ್ದಾರೆ. ಇದರಿಂದ ಅಪರಾಧ ನಿಯಂತ್ರಣ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದರು.
ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ಸರಿಯಾದ ರೀತಿಯ ನಿರ್ದೇಶನ ಇಲ್ಲ. ಡ್ರಗ್ಸ್ ನಿಯಂತ್ರಣ ಮಾಡಬೇಕಾದರೆ ಸೋಶಿಯಲ್ ಎಂಗೇಜ್‌ಮೆಂಟ್ ಮಾಡಬೇಕು. ಅಂದರೆ, ಶಾಲೆ-ಕಾಲೇಜುಗಳು, ಯುನಿವರ್ಸಿಟಿ, ಹಾಸ್ಟೆಲ್‌ಗಳು, ಪಿ.ಜಿ ಸೆಂಟರ್‌ಗಳು, ಅಪಾರ್ಟ್ಮೆಂಟ್‌ಗಳು, ರೆಸಾರ್ಟ್ಸ್, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಸಿನಿಮಾ ಉದ್ಯಮ, ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಇಲ್ಲೆಲ್ಲಾ ಯಾವುದೇ ರೀತಿಯ ಮಾದಕ ವಸ್ತುಗಳ ಜಾಹೀರಾತುಗಳು, ಸಂಬಂಧಿತ ಚರ್ಚೆಗಳು ಬರಬಾರದು. ಗೃಹ ಇಲಾಖೆಯಡಿ ಒಟ್ಟಾರೆ ನಾಲ್ಕು ಹಂತದ ಗುಪ್ತಚರ ವ್ಯವಸ್ಥೆಗಳಿರುತ್ತವೆ. ಈ ಎಲ್ಲ ಹಂತಗಳೂ ವಿಫಲವಾಗುವುದು ಅಂದರೆ ಒಂದೋ ನಿರ್ಲಕ್ಷ್ಯವಿರಬೇಕು ಅಥವಾ ಉದ್ದೇಶಪೂರ್ವಕವೇ ಆಗಿರಬೇಕು ಎಂದು ಭಾಸ್ಕರ್ ರಾವ್ ಹೇಳಿದರು.
ಹುಣಸೂರಿನಲ್ಲಿ ಚಿನ್ನದಂಗಡಿ ದರೋಡೆ; 5 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ!
ಒಟ್ಟಾರೆ, ರಾಜ್ಯದಲ್ಲಿ ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆ ಮತ್ತು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.