ಬೆಂಗಳೂರು: ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಬೆದರಿಕೆ ಸಂದೇಶ (Hoax Bomb Threat) ಬಂದಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ತಕ್ಷಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಜುಲೈ 2ರಂದು ಕೂಡ ಇಸ್ರೋ ಕೇಂದ್ರ ಕಚೇರಿಗೆ ಬೆದರಿಕೆಯ ಇ-ಮೇಲ್ ಸಂದೇಶ ಬಂದಿತ್ತು. ಆರೋಪಿ, ಗಾಜಿಯಾಬಾದ್‌ನ ನಿಶಾಂತ ಎಂಬಾತನನ್ನು ಪೊಲೀಸರು ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಇದೀಗ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು ಆತಂಕ ಸೃಷ್ಟಿಸಿದೆ.
ಈ ಹಿಂದೆ ಬೆದರಿಕೆ ಹಾಕಿದ್ದ ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ತಾಂತ್ರಿಕ ಸಹಾಯದಿಂದ ಮಾಹಿತಿ ಸಂಗ್ರಹಿಸಿ, ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಆರೋಪಿಯನ್ನು ಬಂಧಿಸಿತ್ತು. ಇದೀಗ ಮತ್ತೊಮ್ಮೆ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಕಲಬುರಗಿ ಜಿಲ್ಲಾ ಕೋರ್ಟ್‌ಗೂ ಬಾಂಬ್ ಬೆದರಿಕೆ
ಕಲಬುರಗಿ: ನಗರದ ಜಿಲ್ಲಾ ಕೋರ್ಟ್ ಆವರಣದ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರಕ್ಕೆ ಸೋಮವಾರ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದರು.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿಗೆ ಜೀವ ಬೆದರಿಕೆ; ತನಿಖೆ ಚುರುಕು
ಈ ಕುರಿತು ಮಾತನಾಡಿದ ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., 'ಜಿಲ್ಲಾ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಸೋಮವಾರ ಬೆದರಿಕೆ ಇ-ಮೇಲ್ ಬಂದಿತ್ತು. ಅದರಂತೆ ಕೋರ್ಟ್ ಕಟ್ಟಡಗಳಿಂದ ನ್ಯಾಯಾಧೀಶರು, ಕೋರ್ಟ್ ಸಿಬ್ಬಂದಿಯನ್ನು ಖಾಲಿ ಮಾಡಿಸಿ ತಪಾಸಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಿಬ್ಬಂದಿಯಿಂದ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ. ಹೀಗಾಗಿ ಯಾರೂ ಹೆದರುವ ಅಗತ್ಯವಿಲ್ಲ. ಈ ಬೆದರಿಕೆ ಇ-ಮೇಲ್‌ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳುವಂತೆ ಸ್ಟೇಷನ್ ಬಜಾರ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಸೂಚಿಸಲಾಗಿದೆ' ಎಂದು ತಿಳಿಸಿದ್ದಾರೆ.