ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪದ್ಮನಾಭನಗರದ ನಿವಾಸದಲ್ಲಿ ಚೆನ್ನಮ್ಮ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಹೊಳೆನರಸೀಪುರದಲ್ಲಿ ಸೋಮವಾರ ಅಂತ್ಯಕ್ರಿಯೆ

Chennamma's funeral: ನಾಳೆ ಮಧ್ಯಾಹ್ನದವರೆಗೆ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಚೆನ್ನಮ್ಮ ಅವರ ಅಂತಿಮ ದರ್ಶನ ನಡೆಯಲಿದೆ. ಬಳಿಕ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹರದನಹಳ್ಳಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಸೋಮವಾರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (Chennamma) ಅವರ ಪಾರ್ಥಿವ ಶರೀರವನ್ನು ಮಣಿಪಾಲ ಆಸ್ಪತ್ರೆಯಿಂದ ಪದ್ಮನಾಭನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲು ಸಿದ್ಧತೆ ನಡೆಯುತ್ತಿದ್ದು, ರಾತ್ರಿ 9.30ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ನಾಳೆ ಮಧ್ಯಾಹ್ನದವರೆಗೆ ಪದ್ಮನಾಭನಗರದ ನಿವಾಸದಲ್ಲಿ ಅಂತಿಮ ದರ್ಶನ ನಡೆಯಲಿದೆ. ಬಳಿಕ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹರದನಹಳ್ಳಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಸೋಮವಾರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಜುಲೈ 15ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.

ಅಜ್ಜಿ ಚೆನ್ನಮ್ಮ ನಮ್ಮ ಮನೆಯ ಆಧಾರಸ್ತಂಭವಾಗಿದ್ರು: ನಿಖಿಲ್‌ ಕಂಬನಿ

ಬೆಂಗಳೂರು: ಅನಾರೋಗ್ಯದಿಂದ ನಿಧನರಾದ ಅಜ್ಜಿ ಚೆನ್ನಮ್ಮ (Chennamma) ಅವರನ್ನು ನೆನೆದು ನಿಖಿಲ್‌ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ನಮ್ಮ ಹೆಮ್ಮೆಯ ಅಜ್ಜಿ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಎಚ್.ಡಿ. ದೇವೇಗೌಡ ಸಾಹೇಬರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಲಾರದ ನಷ್ಟ ತಂದಿದೆ ಎಂದು ತಿಳಿಸಿದ್ದಾರೆ.

ಅಜ್ಜಿ ಕೇವಲ ನಮಗೆ ಅಜ್ಜಿಯಾಗಿರಲಿಲ್ಲ; ಇಡೀ ಕುಟುಂಬವನ್ನು ಒಟ್ಟಾಗಿ ಹಿಡಿದಿಟ್ಟಿದ್ದ ಗಟ್ಟಿ ನೆಲೆ ಅವರು. ನಮ್ಮ ಮನೆಯ ದೊಡ್ಡ ಆಧಾರಸ್ತಂಭ. ಮನೆಗೆ ಬಂದ ಯಾರೊಬ್ಬರನ್ನೂ ಅವರು ಹಸಿದ ಹೊಟ್ಟೆಯಲ್ಲಿ ಕಳುಹಿಸುತ್ತಿರಲಿಲ್ಲ; ಬಂದವರೆಲ್ಲರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದ ಅವರ ಆ ಕೈಗಳು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಸ್ವರೂಪವಾಗಿತ್ತು. ಅವರ ಆತಿಥ್ಯ, ಸರಳತೆ ಮತ್ತು ಮಮತೆಯ ಮಾತುಗಳು ನನ್ನ ಜೀವನದ ದೊಡ್ಡ ಸ್ಪೂರ್ತಿ. ಅವರು ಕಲಿಸಿದ ಬದುಕಿನ ಪಾಠಗಳು, ತೋರಿದ ಪ್ರೀತಿ ನನ್ನಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತದೆ.

Chennamma Death: ಕಷ್ಟದ ಸಮಯದಲ್ಲಿ ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತಿದ್ದ ಚೆನ್ನಮ್ಮ

ನಮ್ಮ ಇಡೀ ಕುಟುಂಬದ ದಾರಿದೀಪವಾಗಿದ್ದ ಅಜ್ಜಿಯ ಆತ್ಮಕ್ಕೆ ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ. ಅವರ ಅಗಲಿಕೆಯ ಈ ತೀವ್ರ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನಮ್ಮ ಇಡೀ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.