ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಆಶಾ ಕಾರ್ಯಕರ್ತೆಯರ ಹೋರಾಟ ಕುರುಡು, ಕಿವುಡು ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲʼʼ: ಬಿ.ವೈ. ವಿಜಯೇಂದ್ರ ವಾಗ್ದಾಳಿ

ASHA Workers Protest: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ, 5 ಲಕ್ಷ ರೂಪಾಯಿ ಇಡಿಗಂಟು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಆಶಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು, ನ. 19: ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ, 5 ಲಕ್ಷ ರೂಪಾಯಿ ಇಡಿಗಂಟು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದ್ದು, 3ನೇ ದಿನಕ್ಕೆ ಕಾಲಿಟ್ಟಿದೆ (ASHA Workers Protest). ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಬೈ. ವಿಜಯೇಂದ್ರ ಧರಣಿನಿರತರ ನೆರವಿಗೆ ಧಾವಿಸಿದ್ದಾರೆ. ಪ್ರತಿಭಟನೆಗೆ ಸ್ಪಂದಿಸದ ಕುರುಡು, ಕಿವುಡು ರಾಜ್ಯ ಸರ್ಕಾರಕ್ಕೆ ನೋವು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

''ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ 3 ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಅಹವಾಲು, ಈ ಕುರುಡು, ಕಿವುಡು ಕಾಂಗ್ರೆಸ್ ಸರ್ಕಾರಕ್ಕೆ ಕಾಣುತ್ತಲೂ ಇಲ್ಲ, ಕೇಳುತ್ತಲೂ ಇಲ್ಲ! ತೀವ್ರ ಚಳಿ, ಸಮರ್ಪಕ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ತಾಯಂದಿರಿಗೆ, ಸೋದರಿಯರಿಗೆ ಅನುಕೂಲಗಳಿಲ್ಲದ ಪರಿಸ್ಥಿತಿಯಲ್ಲಿ ಹೋರಾಟ ಮುಂದುವರಿಸುತ್ತಿದ್ದರೂ, ರಾಜ್ಯ ಸರ್ಕಾರ ಸ್ಪಂದಿಸದೇ ಇರುವುದು ಕಳವಳಕಾರಿಯಾಗಿದೆ. ಹಲವಾರು ಸಂಕಷ್ಟಗಳ ನಡುವೆಯೂ, ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರ ಹಿತರಕ್ಷಣೆ ರಾಜ್ಯ ಸರ್ಕಾರದ ಕರ್ತವ್ಯ! ಸರ್ಕಾರ ತತ್ ಕ್ಷಣವೇ ಅವರಿಗೆ ಸ್ಪಂದಿಸಿ, ಮಾತುಕತೆ ನಡೆಸಲಿ'' ಎಂದು ಸಲಹೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರ ಧರಣಿ ಬಗ್ಗೆ ಬಿ.ವೈ. ವಿಜಯೇಂದ್ರ ಎಕ್ಸ್‌ ಪೋಸ್ಟ್‌:



ʼʼಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ತಾಯಿ-ಮಗುವಿನ ಆರೋಗ್ಯ, ಲಸಿಕೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸೇರಿದಂತೆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಸೇವೆ ಅಪಾರ. 2023ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರ ನಿಗದಿತ ಮಾಸಿಕ ಗೌರವಧನವನ್ನು 5,000 ರೂ.ಗಳಿಂದ 8,000 ರೂ.ಗಳಿಗೆ ಹೆಚ್ಚಿಸುವ ಭರವಸೆಯನ್ನು ನೀಡಿದ್ದ ಈ ಕಾಂಗ್ರೆಸ್, ಮೊದಲು ನುಡಿದಂತೆ ನಡೆಯಲಿ! ಅಲ್ಲದೆ, ಕಳೆದ ವರ್ಷ, ಅಂದರೆ 2025ರ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10,000 ರೂ. ನಿಗದಿತ ಗೌರವಧನ ನೀಡುವುದಾಗಿ, ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಘೋಷಿಸಿದ್ದರುʼʼ ಎಂದು ಹೇಳಿದ್ದಾರೆ.

ಹಸುಗೂಸುಗಳೊಂದಿಗೆ ಚಳಿಯಲ್ಲಿ ಮಲಗಿರುವ ತಾಯಂದಿರ ಕಣ್ಣೀರು ಸಿಎಂಗೆ ಕಾಣುತ್ತಿಲ್ಲವೇ?: ನಿಖಿಲ್‌ ಕಿಡಿ

ಪ್ರಣಾಳಿಕೆಯ ಭರವಸೆ ಈಡೇರಿಸಿ

ʼʼಈಗ ಇದೇ ಕಾಂಗ್ರೆಸ್‌ನ ಸಚಿವ ಯು.ಟಿ. ಖಾದರ್, ಕೇಂದ್ರ ಸರ್ಕಾರ 2,000 ರೂ. ನೀಡುತ್ತಿದೆ ಎಂದು ವಾಸ್ತವಕ್ಕೆ ವಿರುದ್ಧವಾದ ಹೇಳಿಕೆ ನೀಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ 2025ರ ಮಾರ್ಚ್‌ನಲ್ಲಿಯೇ ನಿಗದಿತ ಮಾಸಿಕ ಪ್ರೋತ್ಸಾಹ ಧನವನ್ನು 2,000 ರೂ.ಗಳಿಂದ 3,500 ರೂ.ಗಳಿಗೆ ಹೆಚ್ಚಿಸಿದೆ. ಮೊದಲು ಈ ಕಾಂಗ್ರೆಸ್ ಸರ್ಕಾರ, ತಮ್ಮದೇ ಪ್ರಣಾಳಿಕೆಯ ಭರವಸೆ ಮತ್ತು ತಮ್ಮ ಹಿಂದಿನ ಮುಖ್ಯಮಂತ್ರಿಯ ಘೋಷಣೆಯನ್ನು ಈಡೇರಿಸುವ ನೈತಿಕ ಜವಾಬ್ದಾರಿಯನ್ನು ಈಡೇರಿಸಲಿ. ಮೊದಲು ತನ್ನ ಪಾಲಿನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ, ನಂತರ ಕೇಂದ್ರ ಸರ್ಕಾರದ ನೆರವು ಹೆಚ್ಚಳದ ಬಗ್ಗೆ ಚರ್ಚಿಸಲಿ. ಈ ವಿಷಯದಲ್ಲಿ ರಾಜಕೀಯ ಮಾಡದೆ, ಕೂಡಲೇ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡಬೇಕು, ಅವರಿಗೆ ಆರ್ಥಿಕ ಭದ್ರತೆ ಮತ್ತು ಗೌರವಯುತ ಬದುಕು ಕಲ್ಪಿಸಲು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆʼʼ ಎಂದಿದ್ದಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author