ಗುವಾಹಟಿ, ಮಾ. 30: "ಅಸ್ಸಾಂನಲ್ಲಿ ಬದಲಾವಣೆ ಕಾಲ ಬಂದಿದೆ. ಇಡೀ ಅಸ್ಸಾಂ ಹಿಟ್ಲರ್ ಆಡಳಿತದಿಂದ (Assam Elections 2026) ಮುಕ್ತಿ ಪಡೆಯಲು ಬಯಸಿದೆ. ಈ ಹಿಟ್ಲರ್ ಆಡಳಿತಕ್ಕೆ ನಾವು ಕೊನೆ ಹಾಡಬೇಕಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಗುವಾಹಟಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ಅಸ್ಸಾಂ ವಾತಾವರಣ ಚೆನ್ನಾಗಿದೆ, ರಾಜಕೀಯ ತಾಪಮಾನ ಹೆಚ್ಚಾಗಿದೆ. ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಅನೇಕ ಅಸ್ಸಾಮಿಗರನ್ನು ಭೇಟಿ ಮಾಡಿ ಮಾತನಾಡುತ್ತಿದ್ದೇನೆ. ಅವರು ತಮ್ಮ ಅನೇಕ ಅಭಿಪ್ರಾಯಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಆಲೋಚನೆ ಇತ್ತು. ಆಗ ಅವರು ನೀವು ನಮ್ಮ ಮಾತನ್ನು ಪ್ರಕಟಿಸಿದರೆ ನಮ್ಮ ಜೀವಕ್ಕೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಗ ಅಸ್ಸಾಂನಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ" ಎಂದು ತಿಳಿಸಿದರು.
"ನಾವು ಇಲ್ಲಿಗೆ ಶಿಕ್ಷಣ, ಉದ್ಯೋಗಕ್ಕಾಗಿ ಬಂದಿದ್ದು, ಇದು (ಬೆಂಗಳೂರು) ಅತ್ಯಂತ ಸುರಕ್ಷಿತ ನಗರ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಅಸ್ಸಾಂ ಜನ ಹೇಳಿದ್ದಾರೆ. ನನ್ನ ಅಳಿಯನ ಟೀ ಎಸ್ಟೇಟ್‌ನಲ್ಲಿ ಅಸ್ಸಾಂ ಮೂಲದ ಅನೇಕರು ಕೆಲಸ ಮಾಡುತ್ತಿದ್ದಾರೆ. ನಾನು ಅವರ ಜತೆ ಮಾತನಾಡಿದೆ. ಅವರ ಸಮಸ್ಯೆ ಕೇಳಿದೆ. ಸಾಮಾನ್ಯ ಕಾರ್ಮಿಕರು ತಮ್ಮ ಕಣ್ಣೀರ ಕಥೆ ಹೇಳಿಕೊಂಡು ಸಮಸ್ಯೆಗಳನ್ನು ಹಂಚಿಕೊಂಡರು. ಅವರಿಗೆ ಸಿಕ್ಕ ಭರವಸೆ, ಈಡೇರಿಲ್ಲ. ನೀವು ನಮಗೆ ಸಹಾಯ ಮಾಡಬೇಕು, ನೀವು ಮತ್ತೆ ಅಸ್ಸಾಂಗೆ ಹೋಗುವುದು ಯಾವಾಗ ಎಂದು ಒತ್ತಾಯ ಮಾಡಿದರು" ಎಂದರು.
"ಇಲ್ಲಿನ ಆಡಳಿತ ವಿರೋಧಿ ಅಲೆ ಬಗ್ಗೆ ನಾನು ಮಾತನಾಡುತ್ತಿಲ್ಲ. ಇದು ಅಸ್ಸಾಂ ರಾಜ್ಯದ ಜನರಲ್ಲಿರುವ ಬದಲಾವಣೆಯ ಬಯಕೆ ಬಗ್ಗೆ ಮಾತನಾಡುತ್ತಿರುವೆ. ದೊಡ್ಡ ಇತಿಹಾಸವಿರುವ ಕಾಂಗ್ರೆಸ್ ಸರ್ಕಾರವನ್ನು ಅವರು ಬಯಸಿದ್ದಾರೆ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗ ಅಧಿಕಾರದಲ್ಲಿ ಇದ್ದಂತೆ. ಎಲ್ಲ ವರ್ಗ ಒಗ್ಗಟ್ಟಾಗಿರುತ್ತದೆ. ಕಾಂಗ್ರೆಸ್ ಎಲ್ಲರನ್ನು ಒಗ್ಗೂಡಿಸಿದರೆ, ಬಿಜೆಪಿ ವಿಭಜಿಸುತ್ತದೆ" ಎಂದು ಹರಿಹಾಯ್ದರು.
ಭ್ರಷ್ಟಾಚಾರ ಆರೋಪ ಹೊತ್ತಿದ್ದ ಹಿಮಂತ್‌ರನ್ನು ಯಾವ ನದಿಯಲ್ಲಿ ಮುಳುಗಿಸಿ ಸ್ವಚ್ಛ ಮಾಡಿದಿರಿ?
"ಬಿಜೆಪಿಯವರು ಬಾಂಗ್ಲಾ ವಲಸಿಗರ ವಿಚಾರ ಸೇರಿದಂತೆ ಒಂದೆರಡು ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನು ನಮ್ಮ ಮಾಜಿ ಸ್ನೇಹಿತರಿಗೆ ಒಂದು ಮಾತು ಕೇಳಬಯಸುತ್ತೇನೆ. ಹತ್ತು ವರ್ಷಗಳ ಹಿಂದೆ ಅಸ್ಸಾಂನ ಅತ್ಯಂತ ಭ್ರಷ್ಟ ರಾಜಕಾರಣಿ ಎಂಬ ಆರೋಪ ಹೊತ್ತಿದ್ದರು. ಅವರ ವಿರುದ್ಧ ಬಿಜೆಪಿಯವರು ಭ್ರಷ್ಟಾಚಾರ ಆರೋಪದ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಭ್ರಷ್ಟಾಚಾರದ ಅರೋಪ ಹೊತ್ತಿದ್ದ ಅವರು ಇಂದು ಇಷ್ಟು ಸ್ವಚ್ಛವಾಗಿರುವುದು ಹೇಗೆ? ಅವರನ್ನು ಗಂಗಾ, ಬ್ರಹ್ಮಪುತ್ರ ಅಥವಾ ಬೇರೆ ಯಾವ ನದಿಯಲ್ಲಿ ಮುಳುಗಿಸಿ ಅವರನ್ನು ನಿಷ್ಕಲ್ಮಶರನ್ನಾಗಿ ಮಾಡಿದರು? ಈ ಬಗ್ಗೆ ಅಮಿತ್ ಶಾ ಅವರು ಉತ್ತರ ನೀಡಬೇಕು. ಭ್ರಷ್ಟಾಚಾರ ಆರೋಪ ಹೊತ್ತ ಯಾವುದೇ ನಾಯಕರು ಬಿಜೆಪಿಗೆ ಹೋದರೆ ಅವರು ಬಹಳ ಪ್ರಮಾಣಿಕರಾಗುತ್ತಾರೆ. ಇದು ಹೇಗೆ ಎಂದು ಬಿಜೆಪಿ ನಾಯಕರು ಉತ್ತರಿಸಬೇಕು" ಎಂದು ತಿಳಿಸಿದರು.
"ಬಿಜೆಪಿಯವರು ಅನೇಕ ಆಮಿಷ ನೀಡಿ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದ್ದಾರೆ. ಬಿಜೆಪಿ ಬಲಿಷ್ಠವಾಗಿದ್ದರೆ, ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇದ್ದರೆ, ಕಾಂಗ್ರೆಸ್ ಸಂಸದರು, ನಾಯಕರನ್ನು ಸೆಳೆಯುವ ಅಗತ್ಯ ಏನಿತ್ತು? ಕಳೆದ 10 ವರ್ಷಗಳಿಂದ ಅವರದೇ ಸರ್ಕಾರ ಅಧಿಕಾರದಲ್ಲಿದ್ದು, ದಕ್ಷ ಆಡಳಿತ ನೀಡಿ ಉತ್ತಮವಾಗಿ ಕೆಲಸ ಮಾಡಿದ್ದರೆ, ಕಾಂಗ್ರೆಸ್ ನಾಯಕರನ್ನು ಸೆಳೆಯುವ ಅಗತ್ಯವೆನಿತ್ತು? ಈ ಸರ್ಕಾರದ ವಿರುದ್ಧ ಆರೋಪ ಪಟ್ಟಿ ತಯಾರಿಸಿದ ನಾಯಕನ ಬಳಿ ಹೋಗಿ ಅವರನ್ನು ಬೇಡಿಕೊಂಡು, ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ. ಅವರನ್ನು ಕಣಕ್ಕೆ ಇಳಿಸಿದ್ದೀರಿ. ಇದು ಬಿಜೆಪಿಯ ದೌರ್ಬಲ್ಯ ಹಾಗೂ ಸೋಲಿನ ಸೂಚನೆಯಾಗಿದೆ" ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಅವಧಿಯಲ್ಲಿ ಎಷ್ಟು ಬಾಂಗ್ಲಾ ವಲಸಿಗರನ್ನು ವಾಪಸ್ ಕಲಿಸಿದ್ದೀರಿ?
"ಹಿಮಂತ್ ಅವರು ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ವಾಪಸ್ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 44 ಸಾವಿರ ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಲಾಗಿತ್ತು. ಈಗ ಬಿಜೆಪಿ ಸರ್ಕಾರದಲ್ಲಿ ಎಷ್ಟು ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಲಾಗಿದೆ?" ಎಂದು ಪ್ರಶ್ನಿಸಿದರು.
"ಅಸ್ಸಾಂನಲ್ಲಿ ಹಿಟ್ಲರ್ ಆಡಳಿತ ನಡೆಸಲಾಗುತ್ತಿದೆ. ಇಲ್ಲಿನ ಮುಖ್ಯಮಂತ್ರಿಗಳು ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದು, 30 ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಅವರು ತೀರ್ಮಾನ ಮಾಡುತ್ತಾರಂತೆ. ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಇದ್ದವರು. ಕಾಂಗ್ರೆಸ್ ಪಕ್ಷದಲ್ಲಿ ಬೆಳೆದವರು. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಆತಂಕದಲ್ಲಿ ಅವರು ಈ ರೀತಿ ಹೇಳುತ್ತಿದ್ದಾರೆ. ತಾವು ಏನೇ ಹೇಳಿದರು ಅಸ್ಸಾಂ ಜನತೆ ಅದನ್ನು ಸ್ವೀಕರಿಸುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ. ಜನ ಪ್ರಜ್ಞಾವಂತರಾಗಿದ್ದು, ಇದು ಸಾಧ್ಯವಿಲ್ಲ. ಹೀಗಾಗಿ ಜನ ಕಾಂಗ್ರೆಸ್ ಅನ್ನು ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಈ ರಾಜ್ಯವನ್ನು ಒಗ್ಗಟ್ಟಾಗಿ ಇಟ್ಟು, ರಕ್ಷಣೆ ಮಾಡಿದೆ. ಹಿಮಂತ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಭಾಗವಾಗಿದ್ದರು. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ಅವರು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಿಳಿಸಿದರು.
"ಅವರ ರಕ್ತ ಕೂಡ ಕಾಂಗ್ರೆಸ್ ಆಗಿದೆ. ಈ ಮಾತು ಕೇವಲ ನನ್ನದಲ್ಲ. ಬಿಜೆಪಿ ನಾಯಕರು ಇದನ್ನೇ ಹೇಳುತ್ತಿದ್ದಾರೆ. ಬಿಜೆಪಿ ನಾಯಕರೇ ಈಗ ಅವರನ್ನು ವಿರೋಧಿಸುತ್ತಿದ್ದಾರೆ. 30 ಕ್ಷೇತ್ರಗಳ ಬಗ್ಗೆ ಮಾಡಿರುವ ಅರೋಪ ಸುಳ್ಳು. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್‌ಗೆ ದೊಡ್ಡ ಇತಿಹಾಸವಿದೆ. ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಬಂದಿತ್ತಾದರೂ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರು. ಆಮೂಲಕ ಅಧಿಕಾರ ತ್ಯಾಗ ಮಾಡಿದರು. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡ ಪಕ್ಷ ಕಾಂಗ್ರೆಸ್. ಇಂತಹ ಕುಟುಂಬದ ಬಗ್ಗೆ ಸುಳ್ಳು ಅರೋಪ ಮಾಡುತ್ತಿದ್ದಾರೆಂದರೆ ಅವರಿಗೆ ಚುನಾವಣೆಯಲ್ಲಿ ಸೋಲುವ ಆತಂಕ ಆವರಿಸಿದೆ ಎಂದರ್ಥ. ಅವರು ತಮ್ಮ ಪಕ್ಷ, ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ತಿಳಿಸಿದರು.
ಭ್ರಷ್ಟಾಚಾರ ತಾಂಡವ
"ಇಲ್ಲಿನ ಆಡಳಿತ ಹೇಗಿದೆ ಎಂದರೆ ಸೇತುವೆ ನಿರ್ಮಾಣವಾಗಿ ಉದ್ಘಾಟನೆ ಬಳಿಕ ಟೆಂಡರ್ ಕರೆಯಲಾಗಿದೆ. ಇದು ಯಾವ ರೀತಿಯ ಆಡಳಿತ ಎಂದು ಅರ್ಥವಾಗುತ್ತಿಲ್ಲ. ಇನ್ನು ಕೆಲವು ಸೇತುವೆಗಳು ನಿರ್ವಹಣೆ ಇಲ್ಲದೇ ಕುಸಿದು ಬಿದ್ದಿವೆ. ಇವು ಆಡಳಿತದಲ್ಲಿರುವ ದೋಷಕ್ಕೆ ಸಾಕ್ಷಿಯಾಗಿವೆ. ನಾವು ಎಲ್ಲದಕ್ಕೂ ಹೊಣೆಗಾರರಾಗಿರಬೇಕು. ಆದರೆ ಈ ರೀತಿ ಭ್ರಷ್ಟಾಚಾರ, ದುರಾಡಳಿತ ಬೇರೆ ಎಲ್ಲೂ ಇಲ್ಲ. ಸರ್ಕಾರದ ಎಲ್ಲಾ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಬೇರೆ ಯಾವುದೇ ರಾಜ್ಯದಲ್ಲಿ ನಡೆದಿಲ್ಲ. ಹಿಮಂತ್ ಬಿಸ್ವಾ ಅವರ ಸರ್ಕಾರದಲ್ಲಿ ಎಲ್ಲಾ ಸಚಿವರು ಹಾಗೂ ಅವರ ಕುಟುಂಬದವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ" ಎಂದು ಟೀಕಿಸಿದರು.
"ಅಸ್ಸಾಂ ರಾಜ್ಯದಲ್ಲಿ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಿದ ಮಾಧ್ಯಮಗಳ ಮೇಲೆ ದಾಳಿ ಮಾಡಿ ಬೆದರಿಸಲಾಗುತ್ತಿದೆ. ರಾಜಕಾರಣಿಗಳು ತಪ್ಪು ಮಾಡುತ್ತಾರೆ. ತಪ್ಪು ನಡೆದಾಗ ಅದನ್ನು ಒಪ್ಪಿಕೊಳ್ಳಬೇಕು. ಆದರೆ ಜನರ ಧ್ವನಿಯಾಗಿರುವ ಮಾಧ್ಯಮಗಳನ್ನು ಬೆದರಿಸುವುದು ಸರಿಯಲ್ಲ. ಇದರ ವಿರುದ್ಧ ಮಾಧ್ಯಮಗಳು ಒಟ್ಟಾಗಿ ನಿಂತಿರುವುದನ್ನು ನಾನು ಸ್ವಾಗತಿಸುತ್ತೇನೆ" ಎಂದು ತಿಳಿಸಿದರು.
ಕೊಟ್ಟ ಮಾತಿನಂತೆ ನಡೆಯುವುದು ಕಾಂಗ್ರೆಸ್
"ಸಾವಿರಾರು ಸಂಖ್ಯೆಯಲ್ಲಿ ಅಸ್ಸಾಂ ಜನ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಿಗೆ ಬರುತ್ತಿದ್ದಾರೆ ಯಾಕೆ? ಇದಕ್ಕೆ ಕಾರಣ ನಿರುದ್ಯೋಗ. ಕಳೆದ ಚುನಾವನೆಗಳಲ್ಲಿ ನೀವು ಕೊಟ್ಟ ಭರವಸೆಗಳ ಪೈಕಿ ಎಷ್ಟು ಭರವಸೆ ಈಡೇರಿಸಿದ್ದೀರಿ. ಎಷ್ಟು ಯುವಕರಿಗೆ ಉದ್ಯೋಗ, ಅವಕಾಶ ನೀಡಿದ್ದೀರಿ. ಎಷ್ಟು ಹುದ್ದೆ ಭರ್ತಿ ಮಾಡಿದ್ದೀರಿ? ಕಾಂಗ್ರೆಸ್ ಸರ್ಕಾರ ಈ ಯುವಕರ ಭವಿಷ್ಯಕ್ಕೆ ನೆರವಾಗಲು ಬದ್ಧವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಾವು ಕೊಟ್ಟ ಮಾತಿನಂತೆ ನಡೆಯುವ ಇತಿಹಾಸ ಹೊಂದಿದ್ದೇವೆ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಅಸ್ಸಾಂ ಜನರಿಗೆ ಮಾತು ಕೊಡುತ್ತೇನೆ. ಯುವಕರಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ನಿಮ್ಮ ಭವಿಷ್ಯ ಗಾಂಧಿ ಕುಟುಂಬದ ಮೇಲೆ ಅವಲಂಬಿತವಾಗಿದೆ. ರಾಹುಲ್ ಗಾಂಧಿ ಅವರು ಈ ದೇಶದಲ್ಲಿ ಪಾದಯಾತ್ರೆ ಮಾಡಿದಾಗ ಅವರ ಮೇಲೆ ಎಲ್ಲಾ ರೀತಿ ಟೀಕೆ ಮಾಡಿದರು. ದೇಶದಲ್ಲಿ ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸುವ ನಿರ್ಧಾರವನ್ನು ಯಾರು ಮಾಡಿದ್ದರು?" ಎಂದರು.
ಜನರ ಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧ
"ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಕೊಟ್ಟ ಮಾತಿನಂತೆ ನಡೆಯಲಿದೆ. ಅಸ್ಸಾಂ ರಾಜ್ಯದ ಜನರ ಅನುಕೂಲಕ್ಕೆ ನಮ್ಮ ನಾಯಕರು ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದಾರೆ. ನೀವು ನಮಗೆ ಅವಕಾಶ ನೀಡಿ. ನಾವು ದಕ್ಷ ಆಡಳಿತ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಇಡೀ ದೇಶ ಅಸ್ಸಾಂ ಜನರ ಆದೇಶವನ್ನು ಎದುರು ನೋಡುತ್ತಿದೆ" ಎಂದು ತಿಳಿಸಿದರು.
"ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕದಲ್ಲಿ 1.26 ಕೋಟಿ ಬಡ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದೆವು. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಈ ಯೋಜನೆಗಳಿಂದ ಆರ್ಥಿಕತೆ ನಾಶವಾಗುತ್ತಿದೆ ಎಂದು ಆರೋಪ ಮಾಡಿದ್ದ ಪ್ರಧಾನಮಂತ್ರಿಗಳು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆ ನಕಲು ಮಾಡಿದರು. ಚುನಾವಣೆ ಮುನ್ನವೇ ಯೋಜನೆ ಜಾರಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದಾಗ ಜನರು ಅನುಭವಿಸುತ್ತಿರುವ ಕಷ್ಟ ನೋಡಿ ಅದಕ್ಕೆ ಪರಿಹಾರ ನೀಡಲು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಜನಸಾಮಾನ್ಯರು ಬಲಿಷ್ಠವಾದರೆ ದೇಶ ಬಲಿಷ್ಠವಾಗುತ್ತದೆ ಎಂಬ ಕಾರಣಕ್ಕೆ ಈ ಯೋಜನೆ ಯಾರಿಗೆ ತಂದೆವು" ಎಂದು
ವಿವರಿಸಿದರು.
"ಆದರೆ ಇಲ್ಲಿ ಬಿಜೆಪಿ ಪರವಾಗಿರುವ ಮಹಿಳೆಯರಿಗೆ ಮಾತ್ರ ಇಂತಹ ಯೋಜನೆ ತರಲಾಗಿದೆ ಎಂದು ಕೇಳಿ ಅಚ್ಚರಿಯಾಯಿತು. ಬಿಜೆಪಿ ಸಮಾವೇಶಕ್ಕೆ ಹೋಗದಿದ್ದರೆ ಇಂತಹ ಯೋಜನೆಯನ್ನು ನೀಡುವುದಿಲ್ಲ ಎಂದು ಮಹಿಳೆಯರಿಗೆ ಬೆದರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಈ ರೀತಿ ತಾರತಮ್ಯ ಮಾಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ಬಡ ಹಾಗೂ ಅರ್ಹ ಎಲ್ಲಾ ಮಹಿಳೆಯರಿಗೆ ಯೋಜನೆ ತಲುಪಿಸುತ್ತಿದ್ದೇವೆ. ನಾವು ಜಾತಿ, ಸಮುದಾಯದ ಮೇಲೆ ತಾರತಮ್ಯ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ" ಎಂದು ತಿಳಿಸಿದರು.
"ಅಸ್ಸಾಂ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ರಾಜ್ಯದ ಪ್ರತಿ ರಸ್ತೆ, ಸೇತುವೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಇತ್ತೀಚೆಗೆ ನಿಮ್ಮ ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವವರೇ ಆರೋಪ ಮಾಡಿದ್ದು, ಅವರ ಆರೋಪಗಳಿಗೆ ಉತ್ತರಿಸಿ. ಈ ಭ್ರಷ್ಟಾಚಾರಕ್ಕೆ ಅಂತ್ಯವಾಡಿ, ಮಹಿಳೆಯರು ಹಾಗೂ ಯುವಕರ ಪರವಾಗಿ ಕಾರ್ಯಕ್ರಮವನ್ನು ಕಾಂಗ್ರೆಸ್ ಸರ್ಕಾರ ರೂಪಿಸಲಿದೆ" ಎಂದು ಭರವಸೆ ನೀಡಿದರು.
"ನಾನು ಅಸ್ಸಾಂ ಬಿಜೆಪಿಯ ಹಳೆಯ ನಾಯಕರನ್ನು ಕೇಳುವುದೆಂದರೆ, 2014ರ ವೇಳೆ ನೀವು ಹಿಮಂತ್ ವಿರುದ್ಧ ಮಾಡಿದ ಆರೋಪಗಳು ಏನಾದವು? ಈ ಆರೋಪಗಳಿಂದ ಹಿಮಂತ್ ಅವರು ಮುಕ್ತಾರಾಗಿದ್ದು ಹೇಗೆ?" ಎಂದು ಪ್ರಶ್ನಿಸಿದರು.