ಬೆಂಗಳೂರು, ಜು. 9: ಬಹುಬೇಡಿಕೆಯ ಬನಶಂಕರಿ ಸ್ಕೈವಾಕ್ (Banashankari Skywalk) ಯೋಜನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಸಚಿವ ಕೃಷ್ಣಬೈರೇಗೌಡ (Krishnabgowda) ಅವರಿಗೆ ಪತ್ರ ಬರೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅನುಮೋದಿತ ಬನಶಂಕರಿ ಸ್ಕೈವಾಕ್ ಯೋಜನೆ ತಕ್ಷಣ ಜಾರಿಗೆ ತರಬೇಕು. ಸ್ಕೈವಾಕ್ ಅನ್ನು ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಬಲಿ ಕೊಡಬಾರದು ಎಂದು ಆಗ್ರಹಿಸಿದ್ದಾರೆ. ಒಂದು ಸರಳ ಸ್ಕೈವಾಕ್ ನಿರ್ಮಾಣಕ್ಕೂ ಇಷ್ಟು ವರ್ಷ ಬೇಕೇ? ಎಂದೂ ಅವರು ಪ್ರಶ್ನಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಜತೆಗೆ ಕೃಷ್ಣ ಬೈರೇಗೌಡ ಅವರನ್ನು ಟ್ಯಾಗ್ ಮಾಡಿ ಅನುಮೋದಿತ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ತೇಜಸ್ವಿ ಸೂರ್ಯ ಅವರ ಎಕ್ಸ್ ಪೋಸ್ಟ್:
ತೇಜಸ್ವಿ ಸೂರ್ಯ ಪೋಸ್ಟ್‌ನಲ್ಲಿ ಏನಿದೆ?
ʼʼಕೆಲವು ವಾರಗಳ ಹಿಂದೆ ಬನಶಂಕರಿಯಲ್ಲಿ ರಸ್ತೆ ದಾಟುತ್ತಿದ್ದ ಒಬ್ಬ ವೃದ್ಧ ಮಹಿಳೆ ಪ್ರಾಣ ಕಳೆದುಕೊಂಡರು. ಸರಿಯಾದ ಪಾದಚಾರಿ ಮೂಲಸೌಕರ್ಯ ಇದ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತುʼʼ ಎಂದು ಅವರು ಆರಂಭದಲ್ಲಿ ಬರೆದುಕೊಂಡಿದ್ದಾರೆ.
ಮುಂದುವರಿದು, ʼʼ7 ವರ್ಷಗಳಿಂದ ಬನಶಂಕರಿ ಸ್ಕೈವಾಕ್ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಜನರು ನಿಜವಾಗಿಯೂ ಬಳಸುವಂತೆ ಪ್ರಾಯೋಗಿಕ ಹಾಗೂ ಪ್ರಯಾಣಿಕ ಸ್ನೇಹಿ ವೃತ್ತಾಕಾರದ ವಿನ್ಯಾಸವನ್ನು ಸಿದ್ಧಪಡಿಸಿದ್ದೇವೆ. ಬಿಬಿಎಂಪಿ ಬಜೆಟ್‌ನಲ್ಲಿ 45 ಕೋಟಿ ರುಪಾಯಿ ಅನುದಾನವನ್ನು ಮಂಜೂರು ಮಾಡಿಸಿದ್ದೇವೆ. ಶಂಕುಸ್ಥಾಪನೆಯೂ ಆಯಿತು. ಆದರೆ ಇಷ್ಟೆಲ್ಲಾ ಆದರೂ, ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಒಂದು ಸರಳ ಸ್ಕೈವಾಕ್ ನಿರ್ಮಾಣಕ್ಕೂ ಇಷ್ಟು ವರ್ಷ ಬೇಕೇ?ʼʼ ಎಂದು ಪ್ರಶ್ನಿಸಿದ್ದಾರೆ.
ಜುಲೈ 12ರ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
ʼʼಅನುಮೋದಿತ ಬನಶಂಕರಿ ಸ್ಕೈವಾಕ್ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು ಮತ್ತು ಅದನ್ನು ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಬಲಿಕೊಡಬಾರದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದೇನೆ. ಈ ಸ್ಕೈವಾಕ್ ಮಾತ್ರವೇ ಟಿಟಿಎಂಸಿ, ಮೆಟ್ರೋ ನಿಲ್ದಾಣ, ಮಾರುಕಟ್ಟೆ ಮತ್ತು ದೇವಸ್ಥಾನಗಳ ನಡುವೆ ಸುರಕ್ಷಿತ, ಸುಗಮ ಹಾಗೂ ಎಲ್ಲರಿಗೂ ಅನುಕೂಲವಾಗುವಂತೆ ಸಂಪರ್ಕ ಕಲ್ಪಿಸಬಲ್ಲದು. ಸಚಿವರು ವೈಯಕ್ತಿಕವಾಗಿ ಮಧ್ಯ ಪ್ರವೇಶಿಸಿ, ಈ ಬಹುಕಾಲದ ಸಾರ್ವಜನಿಕ ಸುರಕ್ಷತಾ ಯೋಜನೆಯನ್ನು ಕೊನೆಗೂ ಸಾಕಾರಗೊಳಿಸುತ್ತಾರೆ ಎಂಬ ಆಶಯ ನನ್ನದುʼʼ ಎಂದು ಹೇಳಿದ್ದಾರೆ.
ಬೆಂಗಳೂರಿನ ಬನಶಂಕರಿಯಿಂದ ನೈಸ್ ರಸ್ತೆಗೆ 10 ಕಿಮೀ ಎಕ್ಸ್‌ಪ್ರೆಸ್‌ವೇ
ಬಹು ಬೇಡಿಕೆಯ ಯೋಜನೆ
ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಬನಶಂಕರಿ ಜಂಕ್ಷನ್ ಕೂಡ ಒಂದು. ಪ್ರತಿ ದಿನ ಇಲ್ಲಿ ಸುಮಾರು 50,000 ಪ್ರಯಾಣಿಕರು ಓಡಾಡುತ್ತಾರೆ. ಇದು ಬನಶಂಕರಿ ಟಿಟಿಟಿಎಂಸಿ, ಮೆಟ್ರೋ ಸ್ಟೇಷನ್, ಬನಶಂಕರಿ ದೇವಸ್ಥಾನ ಮತ್ತು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಪ್ರತಿ ದಿನ ಈ ಪ್ರದೇಶ ಜನರಿಂದ ಗಿಜಿಗುಡುತ್ತದೆ. ಇದಕ್ಕಾಗಿಯೇ ಪ್ರಯಾಣಿಕರ ಸುರಕ್ಷತೆಗಾಗಿ ಇಲ್ಲಿ ಸ್ಕೈವಾಕ್ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಯೋಜನೆಗಾಗಿ ತೇಜಸ್ವಿ ಸೂರ್ಯ 2019ರಿಂದಲೂ ಧ್ವನಿ ಎತ್ತುತ್ತಲೇ ಬಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.