ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಜೂ. 4ರಂದು ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದು, ಇದೀಗ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ (Bengaluru stampede). ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ (Bengaluru Police Commissioner) ಬಿ.ದಯಾನಂದ್ ಸೇರಿ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಜತೆಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ʼʼಕಾಲ್ತುಳಿತ ಪ್ರಕರಣದ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ನಾ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆʼʼ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ʼʼಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಗಿರೀಶ್.ಎ.ಕೆ. ಅವರನ್ನು ಅಮಾನತು ಮಾಡಲಾಗಿದೆ. ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬಂದ ಕಾರಣ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.
3 ಸಂಸ್ಥೆಗಳ ಬೇಜವಾಬ್ದಾರಿ
ʼʼಆರ್‌ಸಿಬಿ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ 3 ಸಂಸ್ಥೆಗಳ ಬೇಜವಾಬ್ದಾರಿ ಕಂಡು ಬಂದಿದೆ. ಇವುಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಮೂರು ಸಂಸ್ಥೆಗಳು ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಮೃತಪಟ್ಟವರ ಕುಟುಂಬಗಳ ಜತೆಗೆ ನಮ್ಮ ಸರ್ಕಾರ ಇರಲಿದೆ. 30 ದಿನದಲ್ಲಿ ನ್ಯಾಯಾಂಗ ತನಿಖೆ ಮುಗಿಸಲು ಸೂಚಿಸಲಾಗಿದೆʼʼ ಎಂದು ವಿವರಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶೀವಕುಮಾರ್, ಗೃಹಸಚಿವ ಜಿ.ಪರಮೇಶ್ವರ್, ಸಚಿವರಾದ ಎಚ್.ಕೆ.ಪಾಟೀಲ್, ಸುಧಾಕರ್, ಮಹಾದೇವಪ್ಪ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಏನಿದು ಪ್ರಕರಣ?
ಜೂ. 3ರಂದು ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರೋಡ್ ಶೋ ಆಯೋಜಿಸುವ ಬಗ್ಗೆ ಆರ್‌ಸಿಬಿ ಮಾಹಿತಿ ನೀಡಿತ್ತು. ಆದರೆ ಭದ್ರತೆಯ ಕಾರಣ ಅದನ್ನು ರದ್ದುಗಳಿಸಲಾಯಿತು ಮತ್ತು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ವಿಜಯೋತ್ಸವವನ್ನು ನಡೆಸಲು ತೀರ್ಮಾನಿಸಲಾಯಿತು. ಅದರಂತೆ ಬೆಂಗಳೂರಿಗೆ ಬಂದಿಳಿದ ಆರ್‌ಸಿಬಿ ಆಟಗಾರರಿಗೆ ಮೊದಲು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗೌರವಿಸಲಾಗಿತ್ತು. ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆರ್‌ಸಿಬಿ ತಂಡ ತೆರಳಿತ್ತು.
ದೊಡ್ಡ ದುರಂತ
ಆರ್‌ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆಡ ನೆರೆದಿದ್ದ ಅಭಿಮಾನಿಗಳು ಮುಂದಾದ ಕಾರಣ ನೂಕು ನುಗ್ಗಲು ಕಂಡುಬಂತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಆರ್‌ಸಿಬಿ ಅಭಿಮಾನಗಳು ಮೃತಪಟ್ಟರು ಹಾಗೂ 47 ಮಂದಿ ಗಾಯಕ್ಕೆ ತುತ್ತಾಗಿದ್ದಾರೆ.