ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಘೋರ ಘಟನೆ; ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುವ ವೇಳೆ ಲಾರಿ ಹರಿದು 4 ವರ್ಷದ ಬಾಲಕಿ ಸಾವು

ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಅಪಘಾತ ನಡೆದಿದೆ. ತಾಯಿ ಜತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಬಾಲಕಿ ಮೇಲೆ ಲಾರಿ ಹರಿದಿದ್ದರಿಂದ ದುರಂತ ಸಂಭವಿಸಿದೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತ ಬಾಲಕಿ ನಿಶಿಕಾ.

ಬೆಂಗಳೂರು: ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಲಾರಿ ಹರಿದು (Bengaluru Accident) 4 ವರ್ಷದ ಬಾಲಕಿ ಮೃತಪಟ್ಟಿರುವುದು (Girl Death) ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ನಡೆದಿದೆ.

ನಿಶಿಕಾ (4) ಮೃತ ಬಾಲಕಿ. ಯುಗಾದಿ ಹಬ್ಬ ಮುಗಿಸಿ ತಾಯಿ-ಮಗಳು ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳುತ್ತಿದ್ದರು. 2ನೇ ಮಗು ಕಂಕುಳಲ್ಲಿ ಹಾಗೂ ಮೊದಲ ಮಗುವಿನ ಕೈ ಹಿಡಿದು ತಾಯಿ ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಲಾರಿ ಏಕಾಏಕಿ ಮಗುವಿನ ಮೇಲೆ ಹರಿದಿದೆ. ಅಪಘಾತದ ಪರಿಣಾಮ ಹೆತ್ತ ತಾಯಿಯ ಎದುರೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನಿಸಲಾಗಿದೆ.

ಹೆಣ್ಣು ಮಗು ಎಂದು 15 ದಿನದ ಹಸುಗೂಸನ್ನು ಕೊಂದ ಪಾಪಿ ತಂದೆ ಬಂಧನ

ಬೆಳಗಾವಿ: ಹೆಣ್ಣು ಮಗು ಹುಟ್ಟಿದೆ ಎಂದು 15 ದಿನದ ಹಸುಗೂಸನ್ನು ಕೊಲೆ ಮಾಡಿದ್ದ ಪಾಪಿ ತಂದೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿದೆ.

ಹದಿನೈದು ದಿನದ ನವಜಾತ ಶಿಶು ಪ್ರಿಯಾಂಕಾ(15 ದಿನ) ಕೊಲೆಯಾದ ದುರ್ದೈವಿ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಭೀಮರಾಯ ಚಿಪ್ಪಾಡಿ ಕೊಲೆ ಮಾಡಿರುವ ಪಾಪಿ ತಂದೆ. ಸ್ವಂತ ತಂದೆಯಿಂದಲೇ ಮಗುವಿನ ಹತ್ಯೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ನನ್ನ ಗಂಡನೇ ಮಗುವಿಗೆ ವಿಷ ನೀಡಿ ಕೊಲೆ ಮಾಡಿದ್ದಾರೆ ಎಂದು ಹೆಂಡತಿ ಶೀಲಾ ಚಿಪ್ಪಾಡಿ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಭೀಮರಾಯನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.