ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

18 ವರ್ಷ ಪೂರೈಸಿದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಂಚೆ ಇಲಾಖೆಯಿಂದ ಸಿಕ್ತು ವಿಶೇಷ ಗೌರವ

Kempegowda International Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ವಿಮಾನ ನಿಲ್ದಾಣದ 18ನೇ ವಾರ್ಷಿಕೋತ್ಸವದ ಅಂಗವಾಗಿ ಅಂಚೆ ಇಲಾಖೆಯು ಚಿತ್ರವನ್ನು ಒಳಗೊಂಡ ಶಾಶ್ವತ ಅಂಚೆ ಮೊಹರನ್ನು ಬಿಡುಗಡೆ ಮಾಡಿದ್ದು, ಇದರ ಜತೆಗೆ 'ವಿಶೇಷ ಅಂಚೆ ಲಕೋಟೆ' ಮತ್ತು 'ಸ್ಮರಣಾರ್ಥ ಅಂಚೆ ಕಾರ್ಡ್‌ಗಳನ್ನು' ಬಿಡುಗಡೆಗೊಳಿಸಿದೆ.

ಬೆಂಗಳೂರು ಏರ್‌ಪೋರ್ಟ್ 18ನೇ ವಾರ್ಷಿಕೋತ್ಸವದ ಅಂಗವಾಗಿ ಶಾಶ್ವತ ಅಂಚೆ ಮೊಹರು ಬಿಡುಗಡೆ.

ಬೆಂಗಳೂರು, ಮೇ 26: ಭಾರತದ ಮೊದಲ 'ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' (ಕೆಐಎ) (Kempegowda International Airport) ಯಶಸ್ವಿಯಾಗಿ 18 ವರ್ಷಗಳನ್ನು ಪೂರೈಸಿದೆ. 2008ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆರಂಭವಾದ ಈ ವಿಮಾನ ನಿಲ್ದಾಣ, ಇಂದು ಬೆಂಗಳೂರನ್ನು ಜಗತ್ತಿನೊಂದಿಗೆ ಬೆಸೆಯುವ ಪ್ರಮುಖ ಹೆಬ್ಬಾಗಿಲಾಗಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಿಸುವ ಉದ್ದೇಶದಿಂದ 'ಭಾರತೀಯ ಅಂಚೆ ಇಲಾಖೆ' ವಿಶಿಷ್ಟವಾದ ಗೌರವವೊಂದನ್ನು ಸಮರ್ಪಿಸಿದೆ.

ವಿಮಾನ ನಿಲ್ದಾಣದ 18ನೇ ವಾರ್ಷಿಕೋತ್ಸವದ ಅಂಗವಾಗಿ ಅಂಚೆ ಇಲಾಖೆಯು ಚಿತ್ರವನ್ನು ಒಳಗೊಂಡ ಶಾಶ್ವತ ಅಂಚೆ ಮೊಹರನ್ನು (Permanent Pictorial Cancellation Seal) ಬಿಡುಗಡೆ ಮಾಡಿದ್ದು, ಇದರ ಜತೆಗೆ 'ವಿಶೇಷ ಅಂಚೆ ಲಕೋಟೆ' ಮತ್ತು 'ಸ್ಮರಣಾರ್ಥ ಅಂಚೆ ಕಾರ್ಡ್‌ಗಳನ್ನು' ಬಿಡುಗಡೆಗೊಳಿಸಿದೆ.

Bengaluru Airport

ಏನಿದರ ವಿಶೇಷತೆ?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಬಳಸಲಾಗುವ ಈ ಹೊಸ ಅಂಚೆ ಮೊಹರಿನಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಚಿತ್ರದೊಂದಿಗೆ ವಿಮಾನ ನಿಲ್ದಾಣದ ಭವ್ಯ ನೋಟವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಬೆಂಗಳೂರಿನ ಶ್ರೀಮಂತ ಇತಿಹಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಅವಿನಾಭಾವ ಸಂಬಂಧವನ್ನು ಬಿಂಬಿಸುತ್ತದೆ.

ವಿಮಾನ ನಿಲ್ದಾಣದ ಪ್ರಸಿದ್ಧ 'ಫೀಲ್ಸ್ ಲೈಕ್ ಬಿಎಲ್‌ಆರ್' ಅಭಿಯಾನಕ್ಕೆ ಪೂರಕವಾಗಿ ಇದನ್ನು ಹೊರತರಲಾಗಿದೆ. ಈ ವಿಶೇಷ ಲಕೋಟೆ ಮತ್ತು ಅಂಚೆ ಕಾರ್ಡ್‌ಗಳು, ಪ್ರಯಾಣಿಕರಿಗೆ ಮತ್ತು ಅಂಚೆ ಚೀಟಿ ಸಂಗ್ರಹಕಾರರಿಗೆ ಬೆಂಗಳೂರಿನ ಹೆಮ್ಮೆಯನ್ನು ನೆನಪಿಸುವ ಅತ್ಯಮೂಲ್ಯ ಉಡುಗೊರೆಯಾಗಿವೆ.

Bengaluru Kempegowda International Airport

ಈ ಸಂದರ್ಭದಲ್ಲಿ ಮಾತನಾಡಿದ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್, ʼವಿಮಾನ ನಿಲ್ದಾಣ 18 ವರ್ಷ ಪೂರೈಸುತ್ತಿರುವ ಈ ಕ್ಷಣ, ನಮ್ಮ ಹಾಗೂ ನಗರದ ಬೆಳವಣಿಗೆಯ ಪಯಣವನ್ನು ನೆನಪಿಸಿಕೊಳ್ಳುವ ಮಧುರ ಕ್ಷಣವಾಗಿದೆ. ಲಕ್ಷಾಂತರ ಪ್ರಯಾಣಿಕರಿಗೆ ಈ ಏರ್‌ಪೋರ್ಟ್ ಬೆಂಗಳೂರಿನ ಮೊದಲ ಅನುಭವವನ್ನು ನೀಡುತ್ತದೆ. ಅಂಚೆ ಇಲಾಖೆ ಬಿಡುಗಡೆ ಮಾಡಿರುವ ಈ ಮೊಹರು ನಮ್ಮ ಬೆಳವಣಿಗೆಯನ್ನು ಅರ್ಥಪೂರ್ಣವಾಗಿ ಸ್ಮರಿಸುತ್ತದೆ. ಭವಿಷ್ಯದಲ್ಲೂ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಲು ನಾವು ಬದ್ಧರಾಗಿದ್ದೇವೆʼ ಎಂದು ತಿಳಿಸಿದರು.

ಭಾರತೀಯ ಅಂಚೆ ಇಲಾಖೆಯ ಬೆಂಗಳೂರು ಕೇಂದ್ರ ವಲಯದ ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರಾ ಮಾತನಾಡಿ, ʼಕೆಂಪೇಗೌಡ ವಿಮಾನ ನಿಲ್ದಾಣವು ಈ ಭಾಗದ ಅತಿದೊಡ್ಡ ಪ್ರವೇಶ ದ್ವಾರವಾಗಿದೆ. ನಗರದ ಪರಂಪರೆ ಹಾಗೂ ಜಾಗತಿಕ ಗುರುತನ್ನು ಪ್ರತಿಬಿಂಬಿಸುವ ಈ ಸಂಸ್ಥೆಯನ್ನು ಅಂಚೆ ಇಲಾಖೆಯ ಮೂಲಕ ಗೌರವಿಸುತ್ತಿರುವುದು ನಮಗೆ ಸಂತಸ ತಂದಿದೆ. ಈ ವಿಶೇಷ ಲಕೋಟೆ ಮತ್ತು ಕಾರ್ಡ್‌ಗಳು ಪ್ರತಿಯೊಬ್ಬರಿಗೂ ವಿಶೇಷ ನೆನಪಾಗಿ ಉಳಿಯಲಿವೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲಿ ಲಭ್ಯ?

ಸಾಂಸ್ಕೃತಿಕ, ಐತಿಹಾಸಿಕ ಅಥವಾ ಪ್ರವಾಸಿ ಪ್ರಾಮುಖ್ಯತೆಯ ಸ್ಥಳಗಳ ಸ್ಮರಣಾರ್ಥವಾಗಿ ಅಂಚೆ ಇಲಾಖೆ ಇಂತಹ ವಿಶೇಷ ಮೊಹರುಗಳನ್ನು ನೀಡುತ್ತದೆ. ಮೇ 26, 2026 ರಿಂದ ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಈ ಮೊಹರು ಅಧಿಕೃತವಾಗಿ ಲಭ್ಯವಿರಲಿದೆ. ಇನ್ನು ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಾರ್ಡ್‌ಗಳು 'ಬೆಂಗಳೂರು ಜಿಪಿಒ' ನ ಫಿಲಾಟೆಲಿಕ್ ಬ್ಯೂರೋ ಸೇರಿದಂತೆ ಕರ್ನಾಟಕದ ಎಲ್ಲಾ ಪ್ರಮುಖ ಫಿಲಾಟೆಲಿಕ್ ಬ್ಯೂರೋಗಳಲ್ಲಿ ಖರೀದಿಗೆ ದೊರೆಯಲಿವೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 'ಚಾಲೆಂಜರ್ 2026' ಭರ್ಜರಿ ತಾಲೀಮು

ದಕ್ಷಿಣ ಭಾರತದ ಅತ್ಯಂತ ಜನನಿಬಿಡ ಹಾಗೂ ದೇಶದ 3ನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಏರ್‌ಪೋರ್ಟ್, 2025-26ರ ಆರ್ಥಿಕ ವರ್ಷದಲ್ಲಿ 4.44 ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ಒದಗಿಸಿ 'ಎಸಿಐ ಬೃಹತ್‌ ವಿಮಾನ ನಿಲ್ದಾಣ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ 2026ರ ಏಪ್ರಿಲ್‌ನಲ್ಲಿ, ವಿಮಾನ ನಿಲ್ದಾಣದ ಆರಂಭದಿಂದ ಈವರೆಗೆ ಒಟ್ಟು 40 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದ ಮೈಲಿಗಲ್ಲನ್ನೂ ತಲುಪಿದೆ. ಬೇಗನೆ ಕೊಳೆಯುವ ವಸ್ತುಗಳ ಸರಕು ಸಾಗಣೆಯಲ್ಲಿ ಸತತ ಐದನೇ ವರ್ಷವೂ ದೇಶದಲ್ಲೇ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.