ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು (Namma Metro Pass) ಉತ್ತೇಜಿಸುವ ಉದ್ದೇಶದಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಅನ್ನು ಪರಿಚಯಿಸಿದೆ.
ಜ.15ರಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ ಪಾಸ್ ಜಾರಿಯಾಗಲಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಸ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (CSC) ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ QR ಪಾಸ್‌ಗಳ ಪರಿಚಯದೊಂದಿಗೆ, QR ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.
ಮೊಬೈಲ್ QR ಪಾಸ್ ವೈಶಿಷ್ಟ್ಯಗಳು
- ಭದ್ರತಾ ಠೇವಣಿ ಅಗತ್ಯವಿಲ್ಲ: ಸ್ಮಾರ್ಟ್ ಕಾರ್ಡ್‌ಗಳಿಗೆ ಅಗತ್ಯವಿದ್ದ ₹50 ಠೇವಣಿ ಡಿಜಿಟಲ್ QR ಪಾಸ್‌ಗಳಿಗೆ ಇರುವುದಿಲ್ಲ.
- ಸರಳ ಖರೀದಿ ವ್ಯವಸ್ಥೆ: ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು.
- ಸ್ಪರ್ಶರಹಿತ ಪ್ರವೇಶ ಮತ್ತು ನಿರ್ಗಮನ: ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ದರಗಳ ವಿವರ
ಮೊಬೈಲ್ ಕ್ಯೂಆರ್ ಪಾಸ್ (ಠೇವಣಿ ಇಲ್ಲ)
- 1 ದಿನದ ಪಾಸ್- 250 ರೂ.
- 3 ದಿನದ ಪಾಸ್- 550 ರೂ.
- 5 ದಿನದ ಪಾಸ್-850 ರೂ.
ಸ್ಮಾರ್ಟ್ ಕಾರ್ಡ್ ದರ (₹50 ಠೇವಣಿ ಸೇರಿ)
- 1 ದಿನದ ಪಾಸ್- 300 ರೂ.
- 3 ದಿನದ ಪಾಸ್- 600 ರೂ.
- 5 ದಿನದ ಪಾಸ್- 900 ರೂ.
Bengaluru Traffic: ಬೆಂಗಳೂರಲ್ಲಿ ಇನ್ನು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಜೋಕೆ, ಎಫ್‌ಐಆರ್ ಬೀಳಬಹುದು!
ಪ್ರಯಾಣಿಕರ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳನ್ನು ತಪ್ಪಿಸಿ, ಸಮಯವನ್ನು ಉಳಿಸಲು ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಮೊಬೈಲ್ QR-ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಬಿಎಂಆರ್‌ಸಿಎಲ್ ಪ್ರೋತ್ಸಾಹಿಸುತ್ತದೆ. ಈ ಉಪಕ್ರಮವು ಪೂರ್ಣ ಡಿಜಿಟಲ್ ಮತ್ತು ಪ್ರಯಾಣಿಕ ಸ್ನೇಹಿ ಮೆಟ್ರೋ ವ್ಯವಸ್ಥೆ ರೂಪಿಸುವ ಬಿಎಂಆರ್‌ಸಿಎಲ್‌ನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.