ಬೆಂಗಳೂರು: ಕುಡಿತದ ಚಟಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳು ಆಸ್ತಿ ವಿಚಾರಕ್ಕೆ ನಡೆದ ಜಗಳದ ವೇಳೆ ತನ್ನ ಮಗನ ಜತೆ ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಗೇರಿ ವ್ಯಾಪ್ತಿಯಲ್ಲಿ ನಡೆದಿದೆ. 75 ವರ್ಷದ ಜಯಮ್ಮ ಕೊಲೆಯಾದ ವೃದ್ಧೆ. ಪ್ರಕರಣಕ್ಕೆ ಸಂಬಂಧಿಸಿ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೆಂಗೇರಿಯ ಸುಭಾಷ್ ನಗರದಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಕೊಲೆ ನಡೆದಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬದ ಸದಸ್ಯರೆಲ್ಲರೂ ಕುಡಿತದ ಚಟಕ್ಕೆ ಒಳಗಾಗಿದ್ದರಿಂದ ಆಸ್ತಿ ಮಾರಾಟದ ವಿಚಾರವಾಗಿ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು.
ಘಟನೆ ನಡೆದ ರಾತ್ರಿ ಆಸ್ತಿ ಮಾರಾಟದ ಹಣದ ವಿಚಾರಕ್ಕೆ ಜಯಮ್ಮ ಆಕೆಯ ಮಗಳು ಭಾಗ್ಯಲಕ್ಷ್ಮಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ಹೆಚ್ಚಾಗಿ ಜಗಳಕ್ಕೆ ತಿರುಗಿದೆ. ಈ ವೇಳೆ ಭಾಗ್ಯಲಕ್ಷ್ಮಿ ಅವರ ಮಗ ಕುಶಾಲ್ ಕೂಡ ಜಗಳಕ್ಕೆ ಸೇರಿಕೊಂಡಿದ್ದಾನೆ. ಈ ವೇಳೆ, ಮನೆಯಲ್ಲಿದ್ದ ಮುದ್ದೆ ಮಾಡುವ ಕೋಲಿನಿಂದ ಜಯಮ್ಮನ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದು, ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಾಯಿ-ಮಗ ಇಬ್ಬರೂ ಕೊಲೆ ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ ಕೆಲ ಸಮಯದ ಬಳಿಕ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ, ಅಜ್ಜಿ ತೀರಿ ಹೋಗಿದ್ದಾರೆ, ಎಣ್ಣೆ ತೆಗೆದುಕೊಂಡು ಬಾ ಎಂದು ಹೇಳಿದ್ದಾನೆ. ಸ್ನೇಹಿತ ಮದ್ಯ ತೆಗೆದುಕೊಂಡು ಮನೆಗೆ ಬಂದಾಗ, ಕುಶಾಲ್ ಮನೆಯಲ್ಲಿ ಕುಡಿದು ಪಾರ್ಟಿ ಮಾಡುವಂತೆ ನಟಿಸಿದ್ದಾನೆ. ಈ ವೇಳೆ, ಕುಶಾಲ್ ಸ್ನೇಹಿತ ಜಯಮ್ಮನ ಮೃತದೇಹವನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾನೆ.
ಕೆಂಗೇರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೊಲೆ ವಿಚಾರ ಬಯಲಾಗಿದೆ. ಆರೋಪಿಗಳಾದ ಭಾಗ್ಯಲಕ್ಷ್ಮಿ ಮತ್ತು ಆಕೆಯ ಮಗ ಕುಶಾಲ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪಿಜಿ ಮುಂದೆ ಕುಡಿಯಬೇಡಿ ಎಂದಿದ್ದಕ್ಕೆ ಮಾಲೀಕನ ಕೊಲೆ
ಬೆಂಗಳೂರು: ಪಿಜಿ ಮುಂದೆ ಮದ್ಯಪಾನ ಮಾಡಬೇಡಿ ಎಂದು ಹೇಳಿದ್ದಕ್ಕೆ ಮಾಲೀಕನನ್ನು ಇಬ್ಬರು ಯುವಕರು ಬ್ಯಾಟ್‌ನಿಂದ ಹೊಡೆದು ಕೊಂದಿರುವ ಘಟನೆ ಬೆಂಗಳೂರಿನ (Bengaluru Murder Case) ಕಸ್ತೂರಿನಗರ ಮುಖ್ಯ ರಸ್ತೆಯಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ.
ಮಾಧವ್ ಮೇಟ್ಲಿ (37) ಹತ್ಯೆಯಾದ ಪಿ.ಜಿ ಮಾಲೀಕ. ಆರೋಪಿಗಳಾದ ರಾಕೇಶ್ (21) ಹಾಗೂ ಡಾನ್ ಬ್ರೈಟ್ಸನ್ (20) ಎಂಬಾತನನ್ನು ಬಂಧಿಸಲಾಗಿದೆ. ಪಿಜಿ ಮುಂದೆ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಾಲೀಕ ಪ್ರಶ್ನಿಸಿದ್ದರು. ಈ ವೇಳೆ ವಾಗ್ವಾದ ನಡೆದಿದ್ದು, ಆರೋಪಿಗಳು ಬ್ಯಾಟ್ ಕಸಿದುಕೊಂಡು ಮಾಲೀಕನ ಮೇಲೆ ಹಲ್ಲೆ ನೆಡೆಸಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.