ಬೆಂಗಳೂರು, ಮೇ 5: ಪುಟಾಣಿಗಳ ಜ್ಞಾನದಾಹವನ್ನು ತಣಿಸಲು ಮತ್ತು ನಮ್ಮ ಭವ್ಯ ಇತಿಹಾಸದ ಬಗ್ಗೆ ಕುತೂಹಲ ಮೂಡಿಸಲು ಪರಮ್ ಹಿಸ್ಟರಿ ಸೆಂಟರ್ (Param History Center) ಅದ್ಭುತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಯುವಕ ಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ 'ಅನ್ವೇಷಣ 2026' ಎಂಬ ಈ ವಿಶಿಷ್ಟ ಕಾರ್ಯಕ್ರಮವು ಮೇ 11 ರಿಂದ ಮೇ 17ರವರೆಗೆ ಬೆಂಗಳೂರಿನ (Bengaluru News) ಜಯನಗರದ 4ನೇ ಬ್ಲಾಕ್‌ನಲ್ಲಿರುವ 'ಯುವಪಥ' ದಲ್ಲಿ ನಡೆಯಲಿದೆ.
ವಿಭಿನ್ನ ಮತ್ತು ಆಕರ್ಷಕ ಕಾರ್ಯಚಟುವಟಿಕೆ, ರೋಚಕ ಕಥೆಗಳು ಹಾಗೂ ನೈಜ ಅನುಭವದ ಮಾಧ್ಯಮಗಳ ಮೂಲಕ ಮಕ್ಕಳನ್ನು ನಮ್ಮ ಇತಿಹಾಸದ ಕಾಲಗರ್ಭಕ್ಕೆ ಕರೆದೊಯ್ಯುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಬರೀ ಪುಸ್ತಕದ ಪಾಠಗಳಿಗೆ ಸೀಮಿತವಾಗದೆ, ಇತಿಹಾಸವನ್ನು ಸ್ಪರ್ಶಿಸಿ, ಅನುಭವಿಸಿ ಕಲಿಯುವ ವಿನೂತನ ಮಾದರಿಯನ್ನು ಇಲ್ಲಿ ರೂಪಿಸಲಾಗಿದೆ.
ಇತಿಹಾಸದೊಂದಿಗೆ ಮುಖಾಮುಖಿ: ಇಲ್ಲಿದೆ ಹತ್ತು ಹಲವು ವಿಶೇಷತೆ!
ಈ ಬಾರಿ ಶಿಬಿರದಲ್ಲಿ ಇತಿಹಾಸದ ಗಂಭೀರ ವಿಷಯಗಳನ್ನು ಮಕ್ಕಳಿಗೆ ಮೋಜಿನ ರೂಪದಲ್ಲಿ ಹೇಳಿಕೊಡಲು ಈ ಕೆಳಗಿನ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ.
- ಪುರಾತತ್ವ ಉತ್ಖನನ (Archaeology Simulation): ಭೂಮಿಯ ಅಡಿಯಲ್ಲಿ ಅಡಗಿರುವ ಇತಿಹಾಸವನ್ನು ಹೊರತೆಗೆಯುವ ನೈಜ ಅನುಭವ.
- ಪ್ರಾಚೀನ ಕಲೆ ಮತ್ತು ಕರಕುಶಲ: ಹಳೆಯ ಕಾಲದ ಆಭರಣಗಳ ತಯಾರಿಕೆ ಮತ್ತು ನೈಜವಾಗಿ ಮಣ್ಣಿನಲ್ಲಿ ಮಡಿಕೆ ಮಾಡುವ ಕಲೆ.
- ಕಾಲಯಾನದ ಕಥೆಗಳು: ನಮ್ಮ ನಾಡಿನ ವೀರರ ದಂತಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಕಥಾ ಸೆಷನ್‌ಗಳು.
- ಡಿಜಿಟಲ್ ಪರಿಶೋಧನೆ: ಆಧುನಿಕ ತಂತ್ರಜ್ಞಾನದ ಮೂಲಕ ಐತಿಹಾಸಿಕ ತಾಣಗಳ ವರ್ಚುವಲ್ ಭೇಟಿ.
- ಮೋಜಿನ ಆಟಗಳು: ಇತಿಹಾಸ ಪ್ರಜ್ಞೆ ಮೂಡಿಸುವ ಒಳಾಂಗಣ ಕ್ರೀಡೆಗಳು ಹಾಗೂ ಸೃಜನಶೀಲ ಕಲೆಗಳ ಬಗ್ಗೆ ಇಲ್ಲಿ ಕಲಿಯಬಹುದಾಗಿದೆ.
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪ ಅನಾವರಣ; ಟರ್ಮಿನಲ್-2ರ ಸೌಂದರ್ಯಕ್ಕೆ ಹೊಸ ಮೆರುಗು
ಶಿಬಿರದ ಸಮಯ ಮತ್ತು ವಯೋಮಿತಿ
ಈ ಅನ್ವೇಷಣ ಶಿಬಿರವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:20ರವರೆಗೆ ನಡೆಯಲಿದ್ದು, 6 ರಿಂದ 16 ವರ್ಷ ವಯಸ್ಸಿನ ಮಕ್ಕಳು ಈ ಜ್ಞಾನಯಜ್ಞದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9035034728, ಇಮೇಲ್: events@paramexp.org ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.