Bengaluru Robbery Case: ಬೆಂಗಳೂರು ದರೋಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಚಾಲಕ ಸಹಿತ ಮತ್ತೆ ಮೂವರು ವಶಕ್ಕೆ
ಬೆಂಗಳೂರು ನಡೆದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಸಿಎಂಎಸ್ ವಾಹನದ ಚಾಲಕ, ಕ್ಯಾಷಿಯರ್ ಮತ್ತು ಗನ್ ಮ್ಯಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರು ನಡೆಸಿ ಚಾಲಕನನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ನ. 21: ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ನಗರದಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂ. ದರೋಡೆ (Bengaluru Robbery Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಸಿಎಂಎಸ್ ವಾಹನದ ಚಾಲಕ, ಕ್ಯಾಷಿಯರ್ ಮತ್ತು ಗನ್ ಮ್ಯಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರು ನಡೆಸಿ ಚಾಲಕನನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದಾರೆ. ಈಗಾಗಲೇ ಪೊಲೀಸರು ಸಿಎಂಎಸ್ ಮಾಜಿ ನೌಕರ ಝೆವಿಯರ್‌ನನ್ನು ಅರೆಸ್ಟ್ ಮಾಡಿದ್ದಾರೆ. ಜತೆಗೆ ದರೋಡೆಗೆ ಸಹಾಯ ಮಾಡಿದ ಸಂಶಯದ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಅಣ್ಣಪ್ಪನನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ.
ದರೋಡೆ ಮಾಡಲಾದ 7.11 ಕೋಟಿ ರೂ. ಪೈಕಿ ಈಗಾಗಲೇ 5.30 ಕೋಟಿ ರೂ.ಯನ್ನು ಆಂಧ್ರ ಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇಸ್‌ನ ಶಂಕಿತ ರವಿಯ ಪತ್ನಿಯನ್ನು ಗುರುವಾರ (ನವೆಂಬರ್ 20) ರಾತ್ರಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರವಿ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಆತನ ಪತ್ನಿ ಒಪ್ಪಿಕೊಂಡಿದ್ದಾರೆ. ʼʼನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ. ನೀವೇ ಬಂದ್ರಿʼʼ ಎಂದು ಹೇಳಿದ್ದಾರೆ ಎನ್ನಲಾಗಿದೆ.
ʼʼರವಿ ಬೆಂಗಳೂರಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಲಾಸ್ ಆಗಿ ಕೆಲಸ ಇಲ್ಲದೆ ಮನೆಯಲ್ಲಿದ್ದರು. ಈ ವೇಳೆ ಏರಿಯಾದ ಹುಡುಗರನ್ನು ಸೇರಿಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದರುʼʼ ಎಂದು ಅವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂ. ದರೋಡೆ
ಮಾಸ್ಟರ್ ಮೈಂಡ್ ಅಣ್ಣಪ್ಪ ನಾಯ್ಕ್
ಪೊಲೀಸರು ದರೋಡೆ ಕೇಸ್ ಸಂಬಂಧ ಶಂಕಿತರನ್ನು ಬಂಧಿಸಿ ಪ್ರಶ್ನಿಸುತ್ತಿದ್ದಾರೆ. ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬಾತನನ್ನು ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿದೆ. ಇವನೇ ಹುಡುಗರನ್ನು ದರೋಡೆಗೆ ಸಿದ್ಧಪಡಿಸಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ದರೋಡೆಕೋರರ ಪತ್ತೆಗೆ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ದರೋಡೆಗೆ ಬಳಕೆಯಾದ ಇನ್ನೋವಾ ಕಾರು ಗುರುವಾರ (ನವೆಂಬರ್ 20) ತಿರುಪತಿಯಲ್ಲಿ ಸಿಕ್ಕಿದೆ.
ಬೆಂಗಳೂರು ದರೋಡೆ ಪ್ರಕರಣ; ಶಂಕಿತ ಆರೋಪಿಗಳ ಪೋಟೊ ಬಿಡುಗಡೆ ಮಾಡಿದ ಪೊಲೀಸರು
ಏನಿದು ಪ್ರಕರಣ?
ನವೆಂಬರ್ 19ರಂದು ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಲಾಗಿತ್ತು. ನಗರದ ಹೃದಯಭಾಗದಲ್ಲೇ ಈ ಕೃತ್ಯ ನಡೆದಿದ್ದು, ಎಟಿಎಂಗಳಿಗೆ ಹಣ ಹಾಕಲು ಡೇರಿ ಸರ್ಕಲ್ ಫ್ಲೈಓವರ್ ಮೇಲೆ ಹೋಗುತ್ತಿದ್ದ ವಾಹನ ತಡೆದು ದರೋಡೆ ಮಾಡಲಾಗಿತ್ತು. ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹಣ ತುಂಬಿಸಿಕೊಂಡು ವಾಹನದಲ್ಲಿ ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಹೊರಟಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದಿದ್ದ 7-8 ಜನರ ಗ್ಯಾಂಗ್, ಆರ್ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದರು. ಗನ್ಮ್ಯಾನ್ ಸೇರಿದಂತೆ ಎಲ್ಲರನ್ನೂ ಅಲ್ಲೇ ಇಳಿಸಿದ್ದ ಗ್ಯಾಂಗ್, ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್ಗೆ ಕರೆದೊಯ್ದಿದ್ದರು. ಡೇರಿ ಸರ್ಕಲ್ ಬಳಿ ಫ್ಲೈಓವರ್ನಲ್ಲಿ ವಾಹನ ನಿಲ್ಲಿಸಿ, ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು.