ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yogesh gowda Murder Case: ಯೋಗೇಶ್‌ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಆದೇಶ

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್‌ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ, ಸಾಕ್ಷ್ಯ ನಾಶಕ್ಕೆ ಯತ್ನ ಹಾಗೂ ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆ ಕೋರ್ಟ್‌ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇನ್ನುಳಿದಂತೆ ಬಸವರಾಜ್‌ ಮುತ್ತಗಿಗೆ ಮಾಫಿ ಸಾಕ್ಷಿ ಸ್ಥಾನ ಖಚಿತಪಡಿಸಿದೆ.

ಕೊಲೆಯಾಗಿದ್ದ ಬಿಜೆಪಿ ಮುಖಂಡ ಯೋಗೇಶ್‌ ಗೌಡ.

ಬೆಂಗಳೂರು: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ (Yogesh gowda Murder Case) ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ತಂದೆಯನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಮತ್ತು ವಿದ್ಯಾಭ್ಯಾಸದ ದೃಷ್ಟಿಯಿಂದ 16 ಲಕ್ಷ ರೂ. ಪರಿಹಾರದ ಮೊತ್ತವನ್ನು ಪಾವತಿಸಲು ಅಪರಾಧಿಗಳಿಗೆ ಆದೇಶಿಸಿದೆ.

ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಸಾಕ್ಷ್ಯ ನಾಶ ಮಾಡಿದ್ದ 19ನೇ ಅಪರಾಧಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಚೆನ್ನಕೇಶವ ಟಿಂಗರಿಕ‌ರ್‌ಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪ್ರಕಟಿಸಿದ್ದಾರೆ. ಹತ್ಯೆ ಸಂಚು ಮತ್ತು ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ನೀಡಲಾಗಿದೆ.

ಈ ತೀರ್ಪಿನ ಅತ್ಯಂತ ಪ್ರಮುಖ ಹಾಗೂ ಮಾನವೀಯ ಅಂಶವೆಂದರೆ, ಹತ್ಯೆಗೀಡಾದ ಯೋಗೇಶ್ ಗೌಡ ಅವರ ಕುಟುಂಬಕ್ಕೆ ಸಿಕ್ಕಿರುವ ಆರ್ಥಿಕ ನ್ಯಾಯ. ಯೋಗೇಶ್ ಗೌಡ ಅವರ ಮಕ್ಕಳಿಗೆ ಪರಿಹಾರವಾಗಿ 16 ಲಕ್ಷ ರೂಪಾಯಿಗಳನ್ನು ನೀಡುವಂತೆ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಂದೆಯನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಮತ್ತು ವಿದ್ಯಾಭ್ಯಾಸದ ದೃಷ್ಟಿಯಿಂದ ಈ ಪರಿಹಾರದ ಮೊತ್ತವನ್ನು ಪಾವತಿಸಲು ಅಪರಾಧಿಗಳಿಗೆ ಆದೇಶಿಸಲಾಗಿದೆ.

Yogesh Gowda murder case: ಯೋಗೇಶ್‌ ಗೌಡ ನೆನೆದು ಅಕ್ಕ ಕಣ್ಣೀರು; ಕೋರ್ಟ್‌ ತೀರ್ಪಿನ ಬಗ್ಗೆ ಹೇಳಿದ್ದೇನು?

2016ರಲ್ಲಿ ಧಾರವಾಡದ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣವು ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ ತನಿಖೆ ನಡೆಸಲ್ಪಟ್ಟಿದ್ದರೂ, ನಂತರ ಕುಟುಂಬಸ್ಥರ ಒತ್ತಾಯದ ಮೇರೆಗೆ ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. ಸಿಬಿಐ ಅಧಿಕಾರಿಗಳು ಸಲ್ಲಿಸಿದ ಚಾರ್ಜ್‌ಶೀಟ್ ಮತ್ತು ಪ್ರಬಲ ಸಾಕ್ಷ್ಯಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಈಗ ಈ ಕಠಿಣ ಶಿಕ್ಷೆಯನ್ನು ಘೋಷಿಸಿದೆ. ಈ ತೀರ್ಪು ವಿನಯ್ ಕುಲಕರ್ಣಿ ಅವರ ರಾಜಕೀಯ ಭವಿಷ್ಯಕ್ಕೆ ಭಾರಿ ಹಿನ್ನೆಡೆಯುಂಟು ಮಾಡಿದೆ.

ಕೋರ್ಟ್‌ನಲ್ಲಿ ಅಪರಾಧಿಗಳು, ಕುಟುಂಬಸ್ಥರ ಕಣ್ಣೀರು

ಶಿಕ್ಷೆಯ ಪ್ರಮಾಣ ಪ್ರಕಟವಾಗುತ್ತಲೇ ಕೋರ್ಟ್‌ನಲ್ಲಿ ಅಪರಾಧಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. 17 ಮಂದಿ ಅಪರಾಧಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದ ಅಪರಾಧಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಿಕ್ಷೆಯ ಭಯದಿಂದ ಅಪರಾಧಿಗಳು ಆತಂಕದಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ ಮತ್ತು ಮಕ್ಕಳು ಕಣ್ಣೀರು ಹಾಕುತ್ತಾ ಗೋಳಾಡುತ್ತಿದ್ದ ದೃಶ್ಯಗಳು ಕಂಡುಬಂದವು.