ಬೆಂಗಳೂರು, ಜು. 2: ರಾಜಧಾನಿಯ ಹೊರವಲಯದ ತಾವರೆಕೆರೆ ಸಮೀಪದ ಮಾಗಡಿ ರಸ್ತೆಯ ಮಾದಪಟ್ಟಣ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿಸು ಸಂಭವಿಸಿದ ಭೀಕರ ದುರಂತದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಗುರುವಾರ (ಜುಲೈ 2) ಬೆಳಗ್ಗೆ ಏಕಾಏಕಿ ಬಂಡೆ ಕುಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಸ್ಫೋಟದಿಂದ ಈ ಅವಘಡ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೀಗ ಮೃತರ ಗುರುತು ಪತ್ತೆಯಾಗಿದೆ. ಒಟ್ಟು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಪೈಕಿ ಆರು ಜನ ಮಧ್ಯ ಪ್ರದೇಶ ಮೂಲದವರಾಗಿದ್ದರೆ, ಮತ್ತೋರ್ವ ಕಾರ್ಮಿಕ ಯಾದಗಿರಿ ಜಿಲ್ಲೆಯವರು.
ಮೃತರನ್ನು ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಉತ್ತರ ಭಾರತದ ನಾಲ್ವರು, ಕರ್ನಾಟಕದ ಓರ್ವ ಕಾರ್ಮಿಕನಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಮೈಸೂರು ರಸ್ತೆಯಲ್ಲಿರುವ ಆರ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಡಿಕೆಶಿ ಪ್ರತಿಕ್ರಿಯೆ:
ದೇಹ ಛಿದ್ರ ಛಿದ್ರ
ಸುಮಾರು 100 ಅಡಿ ಎತ್ತರದಿಂದ ಬಂಡೆ ಕೆಳಗುರುಳಿದ್ದು, ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದೆ. 3 ಟ್ರ್ಯಾಕ್ಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ಕೇಂದ್ರ ವಲಯ ಐಜಿಪಿ ಎಸ್.ಗಿರೀಶ್ ಘಟನೆ ಬಗ್ಗೆ ಮಾತನಾಡಿ, ʼʼತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 2 ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆ ಇದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬಂಡೆ ಬಿದ್ದು 7 ಮಂದಿ ಮೃತಪಟ್ಟಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ'' ಎಂದು ಹೇಳಿದ್ದಾರೆ. ಬಂಡೆ ಬಿರುಕು ಬಿಟ್ಟಿರುವ ಬಗ್ಗೆ ಕಾರ್ಮಿಕರು ಮೊದಲೇ ಎಚ್ಚರಿಸಿದ್ದರು ಎನ್ನಲಾಗಿದೆ.
ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿದು 7 ಮಂದಿ ಸಾವು; ಬೆಂಗಳೂರಿನ ಮಾದಪಟ್ಟಣದಲ್ಲಿ ದುರಂತ
ಸಿಎಂ, ಡಿಸಿಎಂ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. "ಮಾಗಡಿ ರಸ್ತೆಯ ಕಲ್ಲುಕ್ವಾರಿಯಲ್ಲಿ ದುರಂತ ನಡೆದು 7 ಜನ ಮೃತಪಟ್ಟಿರುವ ಮಾಹಿತಿ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಸ್ಫೋಟ ಅಲ್ಲ, ಬಂಡೆ ಕುಸಿದು ಆಗಿರುವ ದುರಂತ ಎಂದು ತಿಳಿದುಬಂದಿದೆ. ಈ ಕ್ವಾರಿ ಅಕ್ರಮವೇ ಎಂಬುದರ ವರದಿಯನ್ನು ತರಿಸಿಕೊಳ್ಳಲಿದ್ದೇನೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದುʼʼ ಎಂದಿದ್ದಾರೆ.
ʼʼದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇನೆ. ರಾಜ್ಯಾದ್ಯಂತ ಹಲವು ಅಕ್ರಮ ಕ್ವಾರೆಗಳು ಕಾರ್ಯಾಚರಿಸುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಈ ಬಗ್ಗೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಡಾ.ಜಿ. ಪರಮಮೇಶ್ವರ್ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.