ಬೆಂಗಳೂರು, ಜೂ. 11: ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ 39,000 ಕೋಟಿ ರುಪಾಯಿ ಹಗರಣ ನಡೆದಿರುವುದಾಗಿ (Bengaluru Waste Scam Row) ಗಂಭೀರ ಆರೋಪ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲು ಹಾಕಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆ ಒದಗಿಸಲಿ, ಸುಮ್ಮನೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಗುರುವಾರ (ಜೂನ್ 11) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯಪಾಲರ ಬಳಿ ಹೋಗುವುದು ಪರಿಹಾರವಲ್ಲ. ನಿಮ್ಮಲ್ಲಿರುವ ಸಾಕ್ಷ್ಯಗಳನ್ನು ಜನರಿಗೆ ತೋರಿಸಿʼʼ ಎಂದಿದ್ದಾರೆ. ಆ ಮೂಲಕ ಹಗರಣದ ಚರ್ಚೆ ಮತ್ತೊಮ್ಮೆ ಸಕ್ರಿಯವಾಗಿದೆ.
ʼʼಯಾವುದೇ ಹಗರಣ ನಡೆದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಒಂದುವೇಳೆ ಭ್ರಷ್ಟಾಚಾರ ನಡೆದಿದ್ದೇ ಹೌದಾದರೆ ನಿಮ್ಮ ಬಳಿ ಇರುವ ಸೂಕ್ತ ದಾಖಲೆ ಬಿಡುಗಡೆ ಮಾಡಿ. ನಾವು ಯಾವುದೇ ತನಿಖೆಗೆ ಸಿದ್ಧ. ಸಾಕ್ಷ್ಯವಾಗಿ ಬಿಜೆಪಿ ಒಂದು ತುಂಡು ಕಾಗದವನ್ನೂ ನೀಡಿಲ್ಲʼʼ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಆರೋಪವೇನು?
ಮಹಾನಗರದ ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ 39,000 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ʼʼಈ ಪೈಕಿ 10,000 ಕೋಟಿ ರುಪಾಯಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೂ ಲಂಚದ ಪಾಲು ಸೇರಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕುʼʼ ಎಂದು ಆರ್. ಅಶೋಕ್ ಆಗ್ರಹಿಸಿದ್ದರು.
ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್‌ಗೆ ಕೋರ್ಟ್ ನೋಟಿಸ್
ʼʼಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ ಕಾಂಗ್ರೆಸ್ ಸರ್ಕಾರ 39,000 ಕೋಟಿ ರುಪಾಯಿ ಹಗರಣ ನಡೆಸಿದೆ. 35 ವರ್ಷಗಳ ಸುದೀರ್ಘ ಅವಧಿಗೆ ಎಂಎಸ್‌ಡಬ್ಲ್ಯು, ಸೊಲ್ಯೂಶನ್ಸ್ ಲಿಮಿಟೆಡ್‌ಗೆ ನೀಡುತ್ತಿರುವ ಟೆಂಡರ್ ಒಟ್ಟು ಮೊತ್ತದಲ್ಲಿ 10,000 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆಯಲಾಗಿದೆʼʼ ಎಂದು ಹೇಳಿದ್ದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ʼʼಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಸ್ವಚ್ಛತೆಯಲ್ಲಿ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಿಕ್ಕಿತ್ತು. ಈಗ ಇಡೀ ಬೆಂಗಳೂರು ಬೆಚ್ಚಿಬೀಳುವಂತಹ 39,000 ಕೋಟಿ ರುಪಾಯಿ ಹಗರಣ ಕಾಂಗ್ರೆಸ್ ಕಸದ ಹೆಸರಲ್ಲಿ ಮಾಡಿದೆ. ದೇಶದ ಇತಿಹಾಸದಲ್ಲಿಯೇ ಕಸದಲ್ಲೂ ಲೂಟಿ ಮಾಡಿರುವ ಹಗರಣ ಇದೇ ಮೊದಲು. ಇದು ಹೈಕಮಾಂಡ್‌ನ ಕಪ್ಪ ಕಾಣಿಕೆ ಟೆಂಡರ್ ಆಗಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ 514 ಕೋಟಿ ರುಪಾಯಿ ಮತ್ತು ಸಂಸ್ಕರಣೆ ಮತ್ತು ವಿಲೇವಾರಿಗೆ 380 ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದೆ. 11,000 ಪೌರಕಾರ್ಮಿಕರಿಗೆ ವರ್ಷಕ್ಕೆ 444 ಕೋಟಿ ರುಪಾಯಿ ಸಂಬಳ ನೀಡಲಾಗುತ್ತಿದೆ. ಎಲ್ಲ ಸೇರಿ ಸೇರಿ ವರ್ಷಕ್ಕೆ ಒಟ್ಟು 1,344 ಕೋಟಿ ರುಪಾಯಿ ಖರ್ಚಾಗುತ್ತದೆʼʼ ಎಂದು ತಿಳಿಸಿದ್ದರು.
ʼʼಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದಲ್ಲಿ ಈವರೆಗೆ ರಾಜ್ಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಹೊಸದಾಗಿ 39,000 ಕೋಟಿ ರುಪಾಯಿ ಮೊತ್ತದ ಟೆಂಡರನ್ನು ದೆಹಲಿಯ ಕಂಪನಿಗೆ ನೀಡಿದ್ದು, ಇದರಲ್ಲಿ 10,000 ಕೋಟಿ ರುಪಾಯಿ ಕಿಕ್‌ಬ್ಯಾಕ್ ಪಡೆಯಲಾಗಿದೆʼʼ ಎಂದಿದ್ದರು.
ರಾಜ್ಯ ಸರ್ಕಾರವನ್ನು ಟೀಕಿಸಲು ಹೋಗಿ ತಗ್ಲಾಕೊಂಡ್ರ ಆರ್. ಅಶೋಕ್? ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
ರಾಜ್ಯಪಾಲರಿಗೆ ದೂರು
ಅಲ್ಲದೆ ಅಶೋಕ್ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ದೂರು ಕೂಡ ನೀಡಿದ್ದರು. ಈ ಟೆಂಡರ್ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಬೇಕು. ಟೆಂಡರ್ ಪಡೆದ, ಅರ್ಜಿ ಸಲ್ಲಿಸಿದ ಕಂಪನಿಗಳ ಅರ್ಹತೆ ಬಗ್ಗೆ ಪರಿಶೀಲನೆ ನಡೆಸಬೇಕು. ಡಿಪಿಆರ್ ಹಂತದಲ್ಲಾಗಿರುವ ಲೋಪವನ್ನು ತನಿಖೆ ಮಾಡಬೇಕು ಎಂದು ಮನವಿ ಮಾಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.