ಬೆಂಗಳೂರು: ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ರಾಜಧಾನಿ ಮಂದಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಯಾರೇ ವಿರೋಧಿಸಿದರೂ ಕಾವೇರಿ ನೀರಿನ ದರ ಏರಿಕೆ (Bengaluru water tariff) ಅನಿವಾರ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಇದೀಗ ಮತ್ತೊಮ್ಮೆ ದರ ಏರಿಕೆ ಬಗ್ಗೆ ಸುಳಿವು ನೀಡಿರುವ ಅವರು, ಎಲ್ಲವನ್ನೂ ಫ್ರೀಯಾಗಿ ಕೊಟ್ಟರೆ ಸರ್ಕಾರ ನಡೆಸೋದು ಹೇಗೆ? ಜಲಮಂಡಳಿ ಉಳಿಯಬೇಕು ಎಂದರೆ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
ನೀರಿನ ದರ ಏರಿಕೆ ಬಗ್ಗೆ ಮಂಗಳವಾರ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಜಲಮಂಡಳಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು, ಈ ವೇಳೆ ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ಬಿಎಂಆರ್ ಸಿಎಲ್ ಸೇರಿ ಇತರೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ನಗರದ ಅಭಿವೃದ್ಧಿ ಹಾಗೂ ಬಜೆಟ್‌ನ ಸಾಧಕ-ಭಾದಕಗಳ ಚರ್ಚೆ ಜತೆಗೆ ವಿಶೇಷವಾಗಿ ನೀರಿನ ದರ ಏರಿಕೆ ಬಗ್ಗೆಯೂ ಮಾತುಕತೆ ನಡೆದಿದೆ.
ಸಭೆ ಬಳಿಕ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಈಗಾಗಲೇ ಜಲಮಂಡಳಿ ಸಂಸ್ಥೆ ನಷ್ಟದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದು, ದರ ಹೆಚ್ಚಳ ಮಾಡದಿದ್ದರೆ ಬೇಸಿಗೆಯಲ್ಲಿ ಮಂಡಳಿಗೆ ಹೊಡೆತ ಬೀಳುತ್ತೆ. ಕಳೆದ ವರ್ಷ ನಗರದಲ್ಲಿ ನೀರಿನ ಅಭಾವ ಹೆಚ್ಚಾಗಿತ್ತು. ಆದರೆ ಈ ಬಾರಿ ಅದೇ ರೀತಿ ಆಗಬಾರದು ಮತ್ತು ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದ್ದಾರೆ.
2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಇದರಿಂದ ತಿಂಗಳಿಗೆ 85 ಕೋಟಿಯಂತೆ ವರ್ಷಕ್ಕೆ 1 ಸಾವಿರ ಕೋಟಿ ಸಂಸ್ಥೆ ನಷ್ಟ ಎದುರಿಸುತ್ತಿದೆ. ಹೀಗಾಗಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶೀಘ್ರವೇ ನೀರಿನ ದರ ಏರಿಕೆ ಮಾಡುತ್ತೇವೆ, ಜಲಮಂಡಳಿ ಉಳಿಯಬೇಕು ಎಂದರೆ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು?
ನೀರಿನ ದರ ಏರಿಕೆ ಕುರಿತು ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯೆ ನೀಡಿ, ಶೀಘ್ರವೇ ಕಾವೇರಿ ನೀರಿನ ದರ ಏರಿಕೆ ಮಾಡಲು ಸೂಚಿಸಲಾಗಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ನೀರು ಫ್ರೀಯಾಗಿ ಕೊಡ್ತಿದ್ದೇವೆ. ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Narendra Modi: ದೇಶದಲ್ಲಿ ಸಂಗೀತ ಕಛೇರಿ ಆರ್ಥಿಕತೆಗೆ ಸಾಕಷ್ಟು ಅವಕಾಶಗಳಿವೆ; ಪ್ರಧಾನಿ ಮೋದಿ ಅಭಿಮತ