ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actress Ramya: ʼಬೆಸ್ಟ್‌ ನ್ಯೂಸ್‌ ಎವೆರ್‌ʼ; ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ನಟಿ ರಮ್ಯಾ ಸಂತಸ, ವಿದ್ಯಾರ್ಥಿಗಳ ಹೋರಾಟಕ್ಕೆ ಮೆಚ್ಚುಗೆ

Dharmendra Pradhan's resignation: ದೆಹಲಿಯಲ್ಲಿ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಬೃಹತ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ನೀಟ್‌ ಅಕ್ರಮ ಖಂಡಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಬೃಹತ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ವಿಪಕ್ಷಗಳು ಸೇರಿ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ (Actress Ramya) ಅವರು ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ರಮ್ಯಾ ಅವರು, ಬೆಸ್ಟ್ ನ್ಯೂಸ್ ಎವರ್ (ಇಲ್ಲಿವರೆಗಿನ ಅತ್ಯುತ್ತಮ ಸುದ್ದಿ ಇದಾಗಿದೆ). ವಿದ್ಯಾರ್ಥಿಗಳು, ರಾಹುಲ್ ಗಾಂಧಿ ಹಾಗೂ ಕಾಕ್ರೊಚ್ ಜನತಾ ಪಾರ್ಟಿ ಸೇರಿ ಯಾರೆಲ್ಲಾ ಹೋರಾಟ ಮಾಡಿದ್ದೀರೋ ನಿಮ್ಮ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ ಬರೆದಿದ್ದಾರೆ.



ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೆ ವಿರಮಿಸಬಾರದು: ಸಿದ್ದರಾಮಯ್ಯ

Karnataka Chief Minister Siddarmaiah

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವಾಗಿದೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಿಎಂ ಪ್ರತಿಕ್ರಿಯಿಸಿದ್ದಾರೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿಜಯವಾಗಿದೆ. ಬಿಸಿಲು-ಮಳೆ-ಹಸಿವು-ಆರೋಗ್ಯವನ್ನು ಲೆಕ್ಕಿಸದೆ ದೆಹಲಿಯಲ್ಲಿ ಬೀಡುಬಿಟ್ಟು ಪೊಲೀಸರ ದೌರ್ಜನ್ಯದಿಂದಲೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತ ಹೋರಾಟವನ್ನು ನಡೆಸಿದ ಲಕ್ಷಾಂತರ ವಿದ್ಯಾರ್ಥಿ-ಯುವಜನರು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಶಿಕ್ಷಣ ಸಚಿವರ ರಾಜೀನಾಮೆಯಿಂದ ಶಿಕ್ಷಣ ಕ್ಷೇತ್ರದ ಸರ್ವ ಸಮಸ್ಯೆಗಳು ಪರಿಹಾರವಾಗಲಾರದು. ಸರ್ವಾಧಿಕಾರ ಮತ್ತು ದುರಾಡಳಿತದ ಶಾಲೆಯ ಗುರುಗಳು ಕುರ್ಚಿಯಲ್ಲಿ ಭದ್ರವಾಗಿ ಕುಳಿತಿರುವಾಗ ಇಂತಹ ಶಿಷ್ಯರ ನಿರ್ಗಮನದಿಂದ ಶಾಲೆಯ ಸುಧಾರಣೆಯಾಗಲಾರದು. ರಾಜಕೀಯದಿಂದ ಶಿಕ್ಷಣದವರೆಗೆ ಎಲ್ಲವನ್ನೂ ವ್ಯಾಪಾರೀಕರಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿಸುವ ವರೆಗೆ ಶಿಕ್ಷಣ ವ್ಯವಸ್ಥೆಯೂ ಸುಧಾರಣೆಯಾಗದು, ಭಾರತವೂ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲಾರದು.

ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್‌ ಹೆಗಲಿಗೆ ಬೇರೆ ಸಚಿವಾಲಯದ ಜವಾಬ್ದಾರಿ? ರಾಹುಲ್ ಗಾಂಧಿ ಹೇಳಿದ್ದೇನು?

ಈ ಹಿನ್ನೆಲೆಯಲ್ಲಿ ಒಬ್ಬ ಅಸಮರ್ಥ ಮತ್ತು ಭ್ರಷ್ಟ ಸಚಿವನ ರಾಜೀನಾಮೆಗಾಗಿ ಸಂಭ್ರಮಾಚರಣೆ ಮಾಡದೆ, ದೇಶದ ವಿದ್ಯಾರ್ಥಿ-ಯುವಜನರು ಕೇಂದ್ರದಲ್ಲಿರುವ ಅಸಮರ್ಥ ಮತ್ತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೆ ವಿರಮಿಸಬಾರದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ಜನರ ಜೊತೆಗೆ ಇರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.