ಬೆಂಗಳೂರು, ಮೇ 1: ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲು ಮಹತ್ವದ ಕೊಡುಗೆ ನೀಡುತ್ತಿರುವ ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕಾರ್ಮಿಕರ ಅನುಕೂಲಕ್ಕಾಗಿ ಸಾಕಷ್ಟು ನೆರವು ನೀಡಲಾಗಿತ್ತು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು. ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ವತಿಯಿಂದ ಹಮ್ಮಿಕೊಂಡಿದ್ದ ʼಶ್ರಮಿಕ ದಿವಸ್ʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ ಹಾಗೂ ಸಮಾಜಕ್ಕೆ ಶ್ರಮಿಕವರ್ಗ ನೀಡುತ್ತಿರುವ ಕೊಡುಗೆಯನ್ನು ಎಂದಿಗೂ ಮರೆಯಲಾಗದು. 2047ನೇ ಇಸವಿಗೆ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತನೆ ಮಾಡಲು ಶ್ರಮಿಕದ ಪಾತ್ರ ದೊಡ್ಡದು. ಕಾರ್ಮಿಕರು ಇಲ್ಲದೇ ದೇಶ ನಿರ್ಮಾಣವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಇ- ಶ್ರಮ್ ಪೋರ್ಟಲ್ ಅನ್ನು ಆರಂಭಿಸಿ ಅಸಂಘಟಿತ ಕಾರ್ಮಿಕರ ಅಂಕಿ ಅಂಶ ಪಡೆದು ಅವರಿಗೆ ಪಿಂಚಣಿ, ಆರೋಗ್ಯ ಸೇರಿದಂತೆ ಹಲವು ರೀತಿಯ ಸಹಾಯ ಮಾಡಿದರು ಎಂದು ತಿಳಿಸಿದರು.
ಇಡೀ ವಿಶ್ವವನ್ನೇ ನಲುಗಿಸಿದ ಕೋವಿಡ್ ವೇಳೆ ಕಾರ್ಮಿಕರು ಯಾವ ರೀತಿ ತೊಂದರೆಗೆ ಸಿಲುಕಿದ್ದರು ಎಂಬುದನ್ನು ನೋಡಿದ್ದೇವೆ. ಅಂದು ದೇಶದಾದ್ಯಂತ ಪ್ರಧಾನಿ ಮೋದಿ ಅವರು ಶ್ರಮಿಕರಿಗೆ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿದರು. ರಾಜ್ಯದಲ್ಲಿ ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಸಹ ಕಾರ್ಮಿಕರ ನೆರವಿಗೆ ನಿಂತಿತ್ತು ಎಂದು ಸ್ಮರಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರವು 29 ಹಳೆಯ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಿ 4 ಹೊಸ ಕಾರ್ಮಿಕ ಸಂಹಿತೆಗಳನ್ನು ರೂಪಿಸಿತು. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಎನ್‍ಡಿಎ ಸರ್ಕಾರದ ಈ ನಿರ್ಧಾರ ಮಹತ್ವದಾಗಿದೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗೆ ಎಲ್ಲ ವರ್ಗದ ಶ್ರಮಿಕರ ಕೊಡುಗೆ ಇದೆ ಎಂಬುದನ್ನು ಅರಿತಿರುವ ಕೇಂದ್ರ ಸರ್ಕಾರ, ವಿಶ್ವಕರ್ಮ ಯೋಜನೆ ಅನುಷ್ಠಾನ ಮಾಡಿತು. ಅವರ ಶ್ರಮಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಬಿಜೆಪಿ ಸರ್ಕಾರ ಮಾಡುತ್ತಿದೆ. ಸರ್ಕಾರ ಜಾರಿ ಮಾಡಿದ ಸುಧಾರಣೆಗಳನ್ನು, ಕಲ್ಯಾಣ ಯೋಜನೆಗಳನ್ನು ಶ್ರಮಿಕರಿಗೆ ತಲುಪಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಸಶಸ್ತ್ರ ಪಡೆಗಳಿಗೆ ಸಾವಯವ ಆಹಾರ ಪೂರೈಕೆಗೆ ಒತ್ತು; ಜೋಶಿ ನೇತೃತ್ವದಲ್ಲಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳ ಸಭೆ
ಈ ಸಂದರ್ಭದಲ್ಲಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ್, ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಅರುಣ್ ಸೋಮಣ್ಣ, ಕಾರ್ಮಿಕ ಪ್ರಕೋಷ್ಠದ ಸಂಚಾಲಕರು, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.