ಬೆಂಗಳೂರು: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ (BJP-JDS Overnight Dharna) ನಡೆಸಿದರು. ಅಬಕಾರಿ ಸಚಿವರ ಮೇಲೆ ನೇರ ಆರೋಪವಿದ್ದರೂ ರಾಜೀನಾಮೆ ಪಡೆಯದೆ ಸಚಿವರ ಬೆನ್ನಿಗೆ ನಿಂತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಎಂದು ವಿಪಕ್ಷ ಶಾಸಕರು ಆಕ್ರೋಶ ಹೊರಹಾಕಿದರು.
ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಮತ್ತು ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಅಬಕಾರಿ ಸಚಿವರು ರಾಜೀನಾಮೆ ನೀಡುವವರೆಗೆ ಅಹೋರಾತ್ರಿ ಪ್ರತಿಭಟಿಸುತ್ತೇವೆ ಎಂದು ಹೇಳಿದರು.

ಏನಿದು ಭ್ರಷ್ಟಾಚಾರ ಆರೋಪ?
ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ವಿಧಾನಸಭೆಯಲ್ಲಿ ಮಂಗಳವಾರ ಮಧ್ಯಾಹ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಅಬಕಾರಿ ಇಲಾಖೆಯಲ್ಲಿ, ಪರವಾನಗಿ ನೀಡಲು ಮತ್ತು ವರ್ಗಾವಣೆಯನ್ನು ಸುಗಮಗೊಳಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ರೆಕಾರ್ಡಿಂಗ್‌ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ರಾಜ್ಯ ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿದ್ದು, ತಿಮ್ಮಾಪುರ ಅವರಿಗೆ ಪಾಲು ಕೊಡಬೇಕೆಂಬ ಆಡಿಯೋ ವೈರಲ್ ಆಗಿದೆ. ಆ ಆಡಿಯೋ ದಾಖಲೆ ಈ ಪೆನ್‌ಡ್ರೈವ್‌ನಲ್ಲಿದೆ ಎಂದು ಆರ್ ಅಶೋಕ್, ಸದನಕ್ಕೆ ಪೆನ್ಡ್ರೈವ್ ತೋರಿಸಿದ್ದರು.
ಲಂಚ ಪ್ರಕರಣ; ಬಂಧನದ ವೇಳೆ ರಂಪಾಟ ಮಾಡಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು ಸಸ್ಪೆಂಡ್
ಅಬಕಾರಿ ಇಲಾಖೆಯಲ್ಲಿ ಪ್ರತಿ ತಿಂಗಳು ಒಂದೊಂದು ಅಂಗಡಿಯಿಂದ 10-15 ಸಾವಿರ ರೂ ಕಲೆಕ್ಷನ್ ಮಾಡಲಾಗುತ್ತಿದೆ. ಸರಾಸರಿ ಒಂದು ತಿಂಗಳಿ 21 ಕೋಟಿಯಂತೆ ವರ್ಷಕ್ಕೆ 252 ಕೋಟಿ ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಾಜ್ಯ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದರು.