ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯಾಗುತ್ತಿದ್ದಂತೆ, ಇದಕ್ಕೆ ಸರಿಹೊಂದುವ ರೀತಿಯಲ್ಲಿ ಬಿಜೆಪಿಯೂ ಕೆಲ ಆಯಕಟ್ಟಿನ ಹುದ್ದೆಗಳಲ್ಲಿ ಬದಲಾವಣೆ ಮಾಡಲಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಜಾತಿ ಲೆಕ್ಕಾಚಾರ, ಜಿಬಿಎ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸದ್ಯ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರತಿಪಕ್ಷ ಸ್ಥಾನ ಅಶೋಕ್ ಬದಲಿಗೆ ಹಿಂದುಳಿದ ವರ್ಗದ ಒಬ್ಬರನ್ನು ಪ್ರತಿಪಕ್ಷ ಸ್ಥಾನದಲ್ಲಿ ಕೂರಿಸುವ ಮೂಲಕ ಒಬಿಸಿ ಮತಗಳನ್ನು ಸೆಳೆಯುವ ಆಲೋಚನೆಯನ್ನು ಬಿಜೆಪಿ ಮಾಡಿದೆ ಎನ್ನಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಜಿಬಿಎ ಚುನಾವಣೆ ಎದುರಾಗಲಿರುವುರಿಂದ ಪ್ರತಿಪಕ್ಷ ಸ್ಥಾನದಲ್ಲಿಯೇ ಅಶೋಕ್ ಅವರನ್ನು ಮುಂದುವರಿಸುವ ಜತೆಜತೆಗೆ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಸಮಯದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಮೂಲಕ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ. ಈ ರೀತಿ ಮಾಡುವುದರಿಂದ ಬೆಂಗಳೂರಿನ ಅಶೋಕ್ ಹಾಗೂ ಪಿ.ಸಿ.ಮೋಹನ್ ಇಬ್ಬರಿಗೂ ಪ್ರಮುಖ ಸ್ಥಾನ ಸಿಗುವ ಜತೆಜತೆಗೆ ಒಕ್ಕಲಿಗ ಹಾಗೂ ಒಬಿಸಿ ಮತಗಳನ್ನು ಸೆಳೆಯುವ ಆಲೋಚನೆಯಲ್ಲಿ ಬಿಜೆಪಿ ನಾಯಕರಿದ್ದಾರೆ.
ಚುನಾವಣೆಗೆ ಎರಡು ವರ್ಷವಿರುವುದರಿಂದ ಬಿಜೆಪಿ ಸಾಮಾಜಿಕ ಹಾಗೂ ಜಾತಿ ಸಮೀಕರಣಗಳನ್ನು ಪುನರ್‌ಪರಿಶೀಲಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಜಿಬಿಎ ಚುನಾವಣೆ ಹಾಗೂ ನಗರ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಯನ್ನು ಗಮನದಲ್ಲಿಸಿರಿಕೊಂಡು ಪ್ರತಿಪಕ್ಷ ನಾಯಕ ಆರ್. ಅಶೋಕ ಅವರನ್ನು ಆಯಕಟ್ಟಿನ ಸ್ಥಾನದಲ್ಲೇ ಮುಂದುವರಿಸುವ ಸಾಧ್ಯತೆಯಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವ ಮತ್ತು ಚುನಾವಣೆಯಲ್ಲಿ ಅವರ ನಾಯಕತ್ವದ ಉಪಯೋಗ ಪಡೆಯುವ ಲೆಕ್ಕಾಚಾರವಿದೆ. ಇನ್ನೊಂದೆಡೆ, ಒಬಿಸಿ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಕೇಂದ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಚರ್ಚೆ ಶುರುವಾಗಿದೆ. ಪ್ರಮುಖವಾಗಿ ಮೂರು ಬಾರಿ ಸಂಸದ ಪಿ.ಸಿ. ಮೋಹನ್ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಮೂಲಕ ಒಬಿಸಿ ಸಮುದಾಯಕ್ಕೆ ಸ್ಪಷ್ಟ ಸಂದೇಶ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ ಎನ್ನಲಾಗಿದೆ.
ಜಮೀರ್ ಅಹ್ಮದ್‌ಗೆ ಸಂಕಷ್ಟ; ಬೈ ಎಲೆಕ್ಷನ್‌ನಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪ, ಆಡಿಯೊ ವೈರಲ್!
ಮೂಲಗಳ ಪ್ರಕಾರ, ಒಕ್ಕಲಿಗ, ಒಬಿಸಿ ಮತ್ತು ಲಿಂಗಾಯತ ಸಮುದಾಯಗಳ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡುವ ಜತೆಗೆ ಎಲ್ಲರಿಗೂ ಸಮಾನ ಅವಕಾಶ ನೀಡುವುದು ಬಹುದೊಡ್ಡ ಸವಾಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಾಗಿರುವ ಸ್ಥಾನಪಲ್ಲಟ್ಟಗಳಿಂದ ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ತನ್ನ ಸಮೀಕರಣವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡುವ ಸಾಧ್ಯತೆಗಳಿವೆ.