ಬೆಂಗಳೂರು, ಫೆ.09: ನಮ್ಮ ಮೆಟ್ರೋ ದರ ಏರಿಕೆ (Namma Metro fare hike) ವಿರುದ್ಧ ಬೆಂಗಳೂರಿನ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (bjp MP Tejasvi Surya) ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಉತ್ತಮ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟರೆ ಬಂಧನವಾಗುತ್ತದೆ. ಉತ್ತಮ ಬೆಂಗಳೂರಿಗಾಗಿ ಹೋರಾಟ ಮಾಡುವುದು ಅಪರಾಧವಾಗಿದ್ದರೆ, ನಾನು ಸಾವಿರ ಬಾರಿ ಬಂಧನಕ್ಕೊಳಗಾಗಲು ಸಿದ್ಧ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಮೆಟ್ರೋ ದರ ಏರಿಕೆ ಮಧ್ಯಮ ವರ್ಗದ ಜನರಿಗೆ ಭಾರವಾಗಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾನು ಪ್ರತಿಭಟನೆ ಮಾಡುತ್ತಿಲ್ಲ. ಖಾಲಿ ಟ್ರಂಕ್ ಹಿಡಿದಿದ್ದೇನೆ, ನನ್ನನ್ನು ಯಾರೂ ತಡೆಯಬಾರದು ಎಂದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಾಗ, ನಾನು ಖಾಲಿ ಟ್ರಂಕ್ ಹಿಡಿದುಕೊಂಡಿದ್ದೇನೆ. ಸಂಸತ್ತು ಅಧಿವೇಶನ ನಡೆಯುತ್ತಿದ್ದಾಗ ನನ್ನನ್ನು ವಶಕ್ಕೆ ಪಡೆಯುವಂತಿಲ್ಲ. ಕಾನೂನು ತಿಳಿದುಕೊಂಡು ವಶಕ್ಕೆ ಪಡೆಯಿರಿ ಎಂದರು. ತೇಜಸ್ವಿ ಸೂರ್ಯ ಅವರನ್ನು ವಶಕ್ಕೆ ಪಡೆದ ಪೊಲೀಸರು ಟ್ರಂಕ್ ಮೇಲಿದ್ದ ಕಾಂಗ್ರೆಸ್ ಸರ್ಕಾರ ಖಾಲಿ ಟ್ರಂಕ್ ಸರ್ಕಾರ ಪೋಸ್ಟರ್ ತೆಗೆದರು.
Bengaluru Metro Fare Hike: ಪ್ರಯಾಣಿಕರಿಗೆ ಗುಡ್‌ನ್ಯೂಸ್; ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ತಾತ್ಕಾಲಿಕ ಬ್ರೇಕ್
ಬಿಜೆಪಿಯ ಮೌನ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಮಮೂರ್ತಿ ಅವರು, ದರ ಏರಿಕೆಗೆ ತಾತ್ಕಾಲಿಕ ತಡೆ ಆಗಿದೆ. ದರ ಏರಿಕೆ ಕೂಡಲೇ ಕೈ ಬಿಡಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಸಿಟ್ಟು ಹೊರಹಾಕಿದರು.
ಬಿಜೆಪಿ ಪ್ರತಿಭಟನೆ ನಡೆಸುವ ವಿಚಾರ ತಿಳಿದು ಮೊದಲೇ ಸರ್ಕಾರ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿತ್ತು. ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿ ಭದ್ರತೆ ನೀಡಿತ್ತು. ನಿಲ್ದಾಣದ ಹೊರಗೆ ಬಿಎಂಆರ್‌ಸಿಎಲ್ ಭದ್ರತಾ ವಿಭಾಗದ ಸಿಬ್ಬಂದಿಯೂ ನಿಂತಿದ್ದರು.