ಬೆಂಗಳೂರು, ನ.25: ಸದ್ಯದ ರಾಜಕೀಯ ಬೆಳವಣಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅದೇನಿದ್ದರೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು (Congress) ಪುನಃ ಅಧಿಕಾರಕ್ಕೆ ತರುವುದೇ ನಮಗೆಲ್ಲರಿಗೂ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Laxmi Hebbalkar) ಹೇಳಿದರು. ನವೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಡಿಸಿಎಂ ಹೇಳಿಕೆ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದಾಗ, ಅವೆಲ್ಲವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ನಮ್ಮೆಲ್ಲರ ಉದ್ದೇಶ ಒಂದೇ, ಅದು 2028ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಕೆಲಸ ಮಾಡುವುದು.
ನಾನು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದೇನೆ. ಬೆಳಗ್ಗೆ ಮುಖ್ಯಮಂತ್ರಿಗಳಿಗೆ ಆಮಂತ್ರಣ ನೀಡಿ ಬಂದೆ, ಈಗ ಉಪ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದೇನೆ. ಹಾಗಾಗಿ ಬೇರೆ ವಿಷಯಗಳ ಬಗ್ಗೆ ನಾನೇನು ಮಾತನಾಡಲಾರೆ ಎಂದರು.
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ: ತಂದೆ ಪರ ಯತೀಂದ್ರ ಮತ್ತೆ ಬ್ಯಾಟಿಂಗ್
ಇದೇ ಶುಕ್ರವಾರ ಅರಮನೆ ಮೈದಾನದಲ್ಲಿ ನಡೆಯುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ ಉದ್ಘಾಟನೆ, ಅಕ್ಕಪಡೆಗೆ ಚಾಲನೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದ್ದು, ಅವರ ಆಗಮನದ ಕುರಿತು ಇನ್ನಷ್ಟೇ ಖಚಿತವಾಗಬೇಕಿದೆ ಎಂದರು.
ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ: ಡಿ.ಕೆ.ಶಿವಕುಮಾರ್

ಕನಕಪುರ: ನಾನು ಆತ್ಮಸಾಕ್ಷಿಯನ್ನು ನಂಬಿದ್ದೇನೆ. ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ನಾವು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ತಿಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದ್ದಾರೆಯೇ ಎಂದು ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ. ಸಿಎಂ ಹಿರಿಯ ನಾಯಕರು, ನಮ್ಮ ಪಕ್ಷದ ಆಸ್ತಿ. ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಬಹಳ ಸಂತೋಷ. ಅವರು ವಿರೋಧ ಪಕ್ಷದ ನಾಯಕರಾಗಿ ಶ್ರಮಿಸಿದ್ದಾರೆ. ಪಕ್ಷ ಕಟ್ಟಿದ್ದಾರೆ. ನಾವೆಲ್ಲರೂ ಸೇರಿ 2028 ಹಾಗೂ 2029ರ ಚುನಾವಣೆ ಗುರಿಯತ್ತ ಗಮನ ಹರಿಸಬೇಕು” ಎಂದು ತಿಳಿಸಿದರು.
ನೀವು ಸಿಎಂ ಆಗಬೇಕು ಎಂದು ಜನರು ಪೂಜೆ ಮಾಡುತ್ತಿದ್ದಾರಲ್ಲಾ ಎಂದಾಗ, “ನನಗೆ ಅಧಿಕಾರ ಸಿಗಲಿ ಎಂದು ಈಗ ಪೂಜೆ ಮಾಡುತ್ತಿರುವುದಕ್ಕಿಂತ, ನಾನು ಜೈಲಿಗೆ ಹೋದಾಗ ನನ್ನ ತಾಯಂದಿರು, ಯುವಕರು, ಹಿರಿಯರು ದೇವಾಲಯದ ಅರ್ಚಕರು ಮಾಡಿದ ಪ್ರಾರ್ಥನೆಯನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಅವಧಿಯಲ್ಲಿ ನಾನು ಜೈಲಿಂದ ಬಿಡುಗಡೆ ಆದಾಗ ಪೊಲೀಸರ ಬೆದರಿಕೆಗೂ ಹಿಂಜರಿಯದೇ ನನ್ನನ್ನು ಜನ ಸ್ವಾಗತಿಸಿದ್ದರು.
ಅನೇಕರು ನಮ್ಮ ಮನೆಗೆ ಬಂದು ನನ್ನ ಪತ್ನಿ ಹಾಗೂ ಮಕ್ಕಳ ಜೊತೆ ಮಾತನಾಡಿ ಧೈರ್ಯ ತುಂಬಿದ್ದರು. ಅಂದು ಜನ ಹರಕೆ ಹೊತ್ತು ಪ್ರಾರ್ಥಿಸಿದ್ದರು. ಆಗ ಕಟ್ಟಿಕೊಂಡ ಹರಕೆ ಮುಗಿಸಲು ಇನ್ನೂ ನನಗೆ ಆಗುತ್ತಿಲ್ಲ. ಅನೇಕರು ನಾನು ಬಿಡುಗಡೆಯಾಗುವವರೆಗೂ ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ನಾನು ಇಂದು ಡಿಸಿಎಂ ಆಗಿದ್ದು, ಪಕ್ಷದ ಅಧ್ಯಕ್ಷನಾಗಿದ್ದೇನೆ. ಕಷ್ಟಕಾಲದಲ್ಲಿದ್ದಾಗ ಮಾಡಿದ ಪ್ರಾರ್ಥನೆ, ಆಗ ಅವರು ನನಗೆ ಆತ್ಮಸ್ಥೈರ್ಯ ತುಂಬಿದ್ದು ನನಗೆ ಬಹಳ ವಿಶೇಷ” ಎಂದು ತಿಳಿಸಿದರು.
ಪರಪ್ಪನ ಅಗ್ರಹಾರ ಜೈಲಿಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದು ಯಾಕೆ?
ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಬೇಕು ಎಂದು ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಜನ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಅಲ್ಲವೇ ಎಂದು ಕೇಳಿದಾಗ, “ನಾನು ಚುನಾವಣೆ ಸಂದರ್ಭದಲ್ಲಿ ಮಹದೇವಪ್ಪ ಅವರ ಕ್ಷೇತ್ರ, ಮಂಡ್ಯ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನನ್ನ ಮುಖ ನೋಡಿ ಮತ ಹಾಕಿ ಎಂದೂ ಕೇಳಿದ್ದೇನೆ. ಜನ ನಮ್ಮ ಸಾಮೂಹಿಕ ನಾಯಕತ್ವಕ್ಕೆ ಮತ ಹಾಕಿದ್ದಾರೆ. ನನ್ನೊಬ್ಬನಿಗಾಗಿ ಮತ ಹಾಕಿದ್ದಾರೆ ಎಂದು ನಾನು ಹೇಳುವುದಿಲ್ಲ. 224 ಕ್ಷೇತ್ರಗಳಲ್ಲಿ ನಮಗಿಂತ ನಮ್ಮ ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿದ್ದಾರೆ” ಎಂದು ತಿಳಿಸಿದರು.