ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಜಿಬಿಎ ಚುನಾವಣೆಗೆ ಎಲ್ಲಿದೆ ರಾಜ್ಯ ಸರ್ಕಾರದ ತಯಾರಿ? ಬಿ.ವೈ. ವಿಜಯೇಂದ್ರ ಪ್ರಶ್ನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಕರೆದಿದ್ದು, ಶಾಸಕರಿಗೆ ಸಭೆಯ ಕಾರ್ಯಸೂಚಿಯನ್ನೇ ನೀಡಿಲ್ಲ. ಜಿಬಿಎ ಅಜೆಂಡವನ್ನೂ ಕೊಡದೆ ಗೌಪ್ಯವಾಗಿ ಸಭೆ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಹೇಳುತ್ತಾರೆ. ಎಲ್ಲಿದೆ ತಯಾರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರವು ಪೂರ್ವ ತಯಾರಿ ಇಲ್ಲದೇ ಆತುರಾತುರವಾಗಿ ಜಾತಿ ಗಣತಿ ವಿಷಯದಲ್ಲಿ ತೀರ್ಮಾನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಾತಿ ಗಣತಿ ವಿಚಾರದಲ್ಲಿ ಗಣತಿದಾರ ಶಿಕ್ಷಕವೃಂದಕ್ಕೂ ಸಮಸ್ಯೆ ಆಗುತ್ತಿದೆ. ರಜೆ ದಿನಗಳನ್ನೂ ವಿಸ್ತರಿಸಿದ್ದರಿಂದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸಮಸ್ಯೆ ಆಗಲಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳಿಗೆ ಒಂದೊಂದು ದಿನವೂ ಅಷ್ಟೇ ಮಹತ್ವದ್ದು. ಶಾಲೆಗೆ ರಜೆ ಘೋಷಿಸಿ ಶಾಲಾ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಕರೆದಿದ್ದು, ಶಾಸಕರಿಗೆ ಸಭೆಯ ಕಾರ್ಯಸೂಚಿಯನ್ನೇ ನೀಡಿಲ್ಲ. ಜಿಬಿಎ ಅಜೆಂಡವನ್ನೂ ಕೊಡದೆ ಗೌಪ್ಯವಾಗಿ ಸಭೆ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಹೇಳುತ್ತಾರೆ. ಎಲ್ಲಿದೆ ತಯಾರಿ? ಎಂದು ಪ್ರಶ್ನಿಸಿದರು. ಎಷ್ಟು ಅಧಿಕಾರಿಗಳು ಬೇಕು? ಮೂಲಭೂತ ಸೌಕರ್ಯಗಳು, ಯಾವುದೂ ಇಲ್ಲದೇ ರಾಜಕೀಯ ಚಟಕ್ಕೆ ಘೋಷಣೆ ಮಾಡುತ್ತಾರೆ. ಯಾವುದೇ ಯೋಜನೆ ಇಲ್ಲದೇ ಹೊರಟಿದ್ದಾರೆ ಎಂದು ಟೀಕಿಸಿದರು.

ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ

ಬೆಂಗಳೂರಿನ ಜನತೆ ಈ ಸರ್ಕಾರಕ್ಕೆ ಛೀ ಥೂ ಎಂದು ಉಗುಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದೆ ಗುಂಡಿ ಇದೆ; ಅಲ್ಲಿ ಗುಂಡಿ ಇದೆ ಎಂದು ಲೆಕ್ಕ ಹಾಕಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಈ ಸರ್ಕಾರ ಗೊಂದಲದ ಗೂಡಾಗಿದೆ. ಮೊದಲೇ ರೈತರು ಪರದಾಡುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ರೀತಿ ಅತಿವೃಷ್ಟಿಯಾದರೂ ಕೃಷಿ ಸಚಿವರಿಗೆ ಅಲ್ಲಿ ಹೋಗಬೇಕೆಂದು ಅನಿಸುವುದಿಲ್ಲ. ಕಂದಾಯ ಸಚಿವರಿಗೆ ಹೋಗಬೇಕೆಂದು ಅನಿಸುತ್ತಿಲ್ಲ; ಕಂದಾಯ, ಕೃಷಿ ಸಚಿವರಿಗೆ ಅಲ್ಲಿ ಹೋಗಲು ಸಮಯ ಇಲ್ಲವೆಂದಾದರೆ, ಅವರು ಸಚಿವರಾಗಿ ಯಾಕೆ ಇರಬೇಕು ಎಂದು ಕೇಳಿದರು.

ರೈತರು ಪರಿಹಾರಕ್ಕೆ ಇನ್ನೆಷ್ಟು ದಿನ ಕಾಯಬೇಕು?

ನಾನು, ವಿಪಕ್ಷ ನಾಯಕರು, ಬಿಜೆಪಿ ನಿಯೋಗ ಕಲ್ಯಾಣ ಕರ್ನಾಟಕಕ್ಕೆ ಹೋಗಲಿಲ್ಲವೆಂದಾದರೆ, ಮುಖ್ಯಮಂತ್ರಿ ಇಲ್ಲೇ ಎ.ಸಿ. ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ನಲ್ಲಿ ತೀರ್ಮಾನ ಮಾಡುತ್ತಿದ್ದರು ಎಂದು ದೂರಿದರು.

ವಿಪಕ್ಷದವರು ಎಲ್ಲವನ್ನೂ ಟೀಕಿಸುತ್ತಾರೆ ಎಂದು ಭಾವಿಸುವ ಅಗತ್ಯವಿಲ್ಲ. ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. 10 ದಿನಗಳಲ್ಲಿ ಪರಿಹಾರ ಮೊತ್ತ ಕೊಡುವುದಾಗಿ ಸಚಿವ ಕೃಷ್ಣಬೈರೇಗೌಡರು ಹೇಳಿದ್ದಾರೆ. ರೈತರು ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | H-1B Visa Restriction: ಹೆಚ್-1ಬಿ ವೀಸಾಗೆ ಮತ್ತಷ್ಟು ಸಂಕಷ್ಟ- ಹೆಚ್ಚಿನ ನಿರ್ಬಂಧ ವಿಧಿಸಲು ಟ್ರಂಪ್ ಚಿಂತನೆ

ಆಲ್ ಈಸ್ ನಾಟ್ ವೆಲ್

ಆಡಳಿತ ಪಕ್ಷದ ಸಚಿವರು, ಶಾಸಕರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಕಾಂಗ್ರೆಸ್‌ನಲ್ಲಿ ‘ಆಲ್ ಈಸ್ ನಾಟ್ ವೆಲ್ʼ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಪ್ರಾರಂಭ ಆಗಿವೆ. ಬಿಹಾರ ಚುನಾವಣೆ ಬಳಿಕ ಇದು ತಾರ್ಕಿಕ ಅಂತ್ಯಕ್ಕೆ ಹೋಗಲಿದೆ ಎಂದು ಆಡಳಿತ ಪಕ್ಷದವರೇ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.