ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಭಾನುವಾರ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ (RCB fans' celebration) ಮುಗಿಲುಮುಟ್ಟಿತ್ತು.
ಫೈನಲ್ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. ಮ್ಯಾಚ್ ಗೆಲ್ಲುತ್ತಲೇ ಅಭಿಮಾನಿಗಳು ಆರ್‌ಸಿಬಿ ಪರ ಜೈಕಾರಗಳನ್ನು ಕೂಗಿ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಭರ್ಜರಿಯಾಗಿ ವಿಜಯೋತ್ಸವ ಆಚರಿಸಿದರು.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಪಂದ್ಯ ವೀಕ್ಷಣೆಗೆ ಹಲವೆಡೆ ಬೃಹತ್ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು ಜಮಾಯಿಸಿ ಆರ್‌ಸಿಬಿಗೆ ಬೆಂಬಲ ವ್ಯಕ್ತಪಡಿಸುತ್ತಾ, ಕುಣಿದು ಕುಪ್ಪಳಿಸಿದರು.
ಕಳೆದ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ರಸ್ತೆಗಳಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬೆಳಗಾವಿ, ಬಾಗಲಕೋಟೆಯಲ್ಲಿ ಲಾಠಿ ಚಾರ್ಜ್
ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ನೂರಾರು ಯುವಕರು ರಸ್ತೆಗಿಳಿದು ಸಂಭ್ರಮಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಹಾಗೆಯೇ ಮಂಡ್ಯ, ಹುಬ್ಬಳ್ಳಿ, ಬೀದರ್, ಹಾವೇರಿ ಸೇರಿ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ.