ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಿಯಾಂಕ್‌ ಖರ್ಗೆ ದಲಿತರನ್ನು ತುಳಿದು ಬಲಿತರಾಗಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Chalavadi Narayanaswamy: ಪ್ರಿಯಾಂಕ್ ಖರ್ಗೆ ಅವರು ಮಾಡಿದ ಅನಾಹುತಗಳ ಬಗ್ಗೆ ಜನರು ಮರೆಯಬೇಕು, ರಸ್ತೆ ಗುಂಡಿಗಳ ಬಗ್ಗೆ ಹೇಳುವುದನ್ನು ಮರೆತು ಹೋಗಬೇಕು, ಮಳೆಯಿಂದ ರೈತರು ಹಾಳಾದರೆ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ತಂತ್ರಗಾರಿಕೆ ಮಾಡುತ್ತಿದ್ದು, ಪ್ರಚಾರಕ್ಕಾಗಿ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರವು ಅತಿವೃಷ್ಟಿ, ಅನಾವೃಷ್ಟಿ, ರಸ್ತೆ ಗುಂಡಿ ಮುಚ್ಚುವ ಕಡೆ ಗಮನ ಕೊಟ್ಟಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ಕಡೆ ಅತಿವೃಷ್ಟಿ ಇದ್ದು, ರಾಜ್ಯ ಸರ್ಕಾರ (State Congress Government) ಕಿಂಚಿತ್ತು ತಲೆಕೆಡಿಸಿಕೊಳ್ಳಲಿಲ್ಲ. ಬಿಜೆಪಿ ರಾಜ್ಯ ಅಧ್ಯಕ್ಷರು, ನಾನು, ಆರ್. ಅಶೋಕ್ (R Ashok) ಮತ್ತು ಸಿ.ಟಿ. ರವಿ (CT Ravi) ಇನ್ನು ಮುಂತಾದ ಅನೇಕ ನಾಯಕರು ಎರಡು ತಂಡವಾಗಿ ಅತಿವೃಷ್ಟಿಯ ಪ್ರದೇಶಕ್ಕೆ ಹೋಗಿದ್ದೆವು. ನಾವು ಹೋದ ಮೇಲೆ ಮುಖ್ಯಮಂತ್ರಿಗಳು ವಿಮಾನ ಹತ್ತಿದರು; ಕೆಲವು ಘೋಷಣೆ ಮಾಡಿದರು. ಆದರೆ ಘೋಷಣೆಗಳು ಜನರಿಗೆ ತಲುಪಲಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಈಗಾಗಲೇ ಕಲಬುರಗಿ, ಚಿಕ್ಕೋಡಿ, ಬಿಜಾಪುರ ಪ್ರಾಂತಗಳಲ್ಲಿ ಜನರು ಬೀದಿಗಿಳಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಧರಣಿ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು ಮತ್ತು ಕೋಲಾರ ಮುಂತಾದ ಭಾಗಗಳಲ್ಲಿ ಅನಾವೃಷ್ಟಿ ಇದೆ. ಇದರ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.

ರಸ್ತೆ ಗುಂಡಿಗಳಿಗೆ ಮಹತ್ವ ಕೊಡದ ಈ ಸರ್ಕಾರ, ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಈ ಗುಂಡಿಗಳು ಇರುತ್ತಿರಲಿಲ್ಲ ಎಂದು ಹೇಳುವುದಕ್ಕೆ ಪ್ರಾರಂಭಿಸಿದೆ ಎಂದು ಆಕ್ಷೇಪಿಸಿದರು. ನಾವು ಸರ್ಕಾರ ಕಳೆದುಕೊಂಡು ಎರಡೂವರೆ ವರ್ಷವಾಯಿತು. ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆ ಗುಂಡಿಗಳು ಬೀಳುವುದು ಸಹಜ, ಆದರೆ ಈಗಲೂ ನಮ್ಮದೇ ಸರ್ಕಾರ ಇದೆ ಎಂದು ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಅಥವಾ ಎಲ್ಲೇ ರಸ್ತೆ ಗುಂಡಿಗಳು ಇದ್ದರೆ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಸರ್ಕಾರ ಮತ್ತು ಸಚಿವರಿಗೆ ಮುಖವು ಆಡಳಿತದಲ್ಲಿ ಕಾಣುತ್ತಿಲ್ಲ, ರಸ್ತೆ ಗುಂಡಿಗಳಲ್ಲಿನ ನೀರಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಮುಖ ಕಾಣುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.

750 ಕೋಟಿ ಎಲ್ಲಿ ಹೋಗಿದೆ?

ಅನೇಕ ಉದ್ಯಮಿಗಳು ಸರ್ಕಾರಕ್ಕೆ ಪತ್ರ ಬರೆದರೂ ತಲೆಕೆಡಿಸಿಕೊಳ್ಳಲಿಲ್ಲ. ಹೋಗುವವರು ಹೋಗಲಿ ಎಂದು ದುರಹಂಕಾರದ ಮಾತನಾಡಿದರು ಎಂದು ಹೇಳಿದರು. ಬಿಜೆಪಿ ಸರ್ಕಾರ ಇದ್ದಾಗ ರಸ್ತೆ ಗುಂಡಿಗಳು ಇದ್ದು, ಅದನ್ನು ಮುಚ್ಚಿದೆ. ಆ ಕಾಲಘಟ್ಟವನ್ನು ಇಂದು ಹೇಳುವುದಲ್ಲ. ಇಂದು ಗುಂಡಿಗಳು ಬಿದ್ದಿದ್ದು, ಸರ್ಕಾರ 750 ಕೋಟಿ ನೀಡಿದ್ದೇವೆ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ ಆ ಹಣ ಎಲ್ಲಿ ಹೋಗಿದೆ?; ಯಾರ ಜೇಬಿಗೆ ಹೋಗಿದೆ?; ಅದರೂ ಗುಂಡಿಗಳು ಏಕೆ ಹಾಗೆಯೇ ಉಳಿದಿವೆ ಎಂದು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ದಲಿತ ಎಂಬುದಕ್ಕೆ ಏನಾದರು ಕುರುಹು ಇದೆಯೇ ಎಂದು ಪ್ರಶ್ನಿಸಿದರು. ಅವರು ದಲಿತರಲ್ಲ, ಎಲ್ಲ ದಲಿತರನ್ನು ತುಳಿದು ಸಂಹಾರ ಮಾಡಿ ಮತ್ತು ದಲಿತರನ್ನು ಒಡೆದು ನೀವು ಬಲಿತರಾಗಿದ್ದೀರಿ ಎಂದು ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಅವರು ದಲಿತರ ಹೆಸರಿನಲ್ಲಿ ಮಾಡಿರುವ ಆಸ್ತಿಯನ್ನು ದಲಿತರ ಕಲ್ಯಾಣಕ್ಕೆ ಉಪಯೋಗಿಸಿದರೆ ಕರ್ನಾಟಕದ ಎಲ್ಲ ದಲಿತರು ಸಮಾನರಾಗಿ ಉತ್ತಮ ಜೀವನವನ್ನು ಕಂಡುಕೊಳ್ಳುತ್ತಾರೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರಚಾರಕ್ಕಾಗಿ ಹೇಳಿಕೆ ಕೊಡುವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ ಅವರು ಮಾಡಿದ ಅನಾಹುತಗಳ ಬಗ್ಗೆ ಜನರು ಮರೆಯಬೇಕು, ರಸ್ತೆ ಗುಂಡಿಗಳ ಬಗ್ಗೆ ಹೇಳುವುದನ್ನು ಮರೆತು ಹೋಗಬೇಕು, ಮಳೆಯಿಂದ ರೈತರು ಹಾಳಾದರೆ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ತಂತ್ರಗಾರಿಕೆ ಮಾಡುತ್ತಿದ್ದು, ಪ್ರಚಾರಕ್ಕಾಗಿ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‍ನಲ್ಲಿ ದಲಿತರನ್ನು ದಮನ ಮಾಡುವ ಉದ್ದೇಶದಿಂದ ಕೆಲವು ದಲಿತರು ಕಾಂಗ್ರೆಸ್‍ನ ಗುಲಾಮರಾಗಿ ತಮ್ಮ ಕುಟುಂಬದ ರಕ್ಷಣೆ ಮಾಡಿಕೊಂಡಿದ್ದಾರೆ. ಇಡೀ ಸಮುದಾಯದ ಬೆಳವಣಿಗೆಗಳನ್ನು ಸಹಿಸದೇ ಅವರನ್ನು ಬಡವರಾಗಿಯೇ ಇಟ್ಟಿದ್ದಾರೆ. ನಮ್ಮ ಕುಟುಂಬಗಳು ಮಾತ್ರ ಅಧಿಕಾರದಲ್ಲಿರಬೇಕು ಎಂಬ ಕಾರಣದಿಂದ ಬೇರೆ ಪಕ್ಷದಲ್ಲಿರುವ ದಲಿತರ ಬಗ್ಗೆ ಮಾತನಾಡಿ ಅವರ ಭವಿಷ್ಯವನ್ನು ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್‍ನಲ್ಲಿರುವ ಕೆಲವು ಕುಟುಂಬಗಳು ಮಾಡುತ್ತಿವೆ ಎಂದು ಆರೋಪಿಸಿದರು.

ಪ್ರಿಯಾಂಕ ಖರ್ಗೆ ಅವರಿಗಿಂತ ಮೇಧಾವಿಗಳು ಯಾರೂ ಇಲ್ಲವೇ?; ಅಪ್ಪನ ಆಶೀರ್ವಾದದಿಂದ ಮಂತ್ರಿಯಾಗಿದ್ದೀರಿ. ಇಲ್ಲದಿದ್ದರೆ ಏನು ಆಗಿರುತ್ತಿದ್ದಿರಿ ಎಂದು ಕೇಳಿದರು. ನರೇಂದ್ರಸ್ವಾಮಿ, ಎಸ್.ಎನ್. ನಾರಾಯಣಸ್ವಾಮಿ, ಅನೇಕಲ್ ಶಿವಣ್ಣ, ಪ್ರಸಾದ್ ಅಬ್ಬಯ್ಯ ಇತ್ಯಾದಿ ನಾಯಕರು ಹಲವಾರು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅದರೂ ಅವರು ನಿಮ್ಮನ್ನು ತುಳಿದು ಮಂತ್ರಿ ಆಗುವುದಕ್ಕೆ ಆಗಲಿಲ್ಲ. ಇವರೆಲ್ಲರನ್ನು ಸಮಾಧಿ ಮಾಡಿ ಮಂತ್ರಿಯಾಗಿದ್ದೀರಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಈ ಸುದ್ದಿಯನ್ನೂ ಓದಿ | ನಿಮಗೆ ತಾಕತ್ತು ಇದ್ದರೆ ಆರ್‌ಎಸ್‌ಎಸ್‌ ನಿಷೇಧಿಸಿ; ಪ್ರಿಯಾಂಕ್‌ ಖರ್ಗೆಗೆ ಛಲವಾದಿ ನಾರಾಯಣಸ್ವಾಮಿ ಸವಾಲು

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರರಾದ ಪ್ರಕಾಶ್ ಪ್ರಕಾಶ್ ಶೇಷರಾಘವಾಚಾರ್, ಮೋಹನ್ ವಿಶ್ವ, ಬಿಜೆಪಿ ಮುಖಂಡರಾದ ರುದ್ರಯ್ಯ ಮತ್ತು ಎಚ್. ಹನುಮಂತಪ್ಪ ಉಪಸ್ಥಿತರಿದ್ದರು.