ಬೆಂಗಳೂರು: ಕಾರವಾರ (Karwar) ಶಾಸಕ ಸತೀಶ್ ಸೈಲ್‌ಗೆ (Satish Sail) ಮತ್ತೆ ಸಂಕಷ್ಟ ಎದುರಾಗಿದೆ. ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಸೈಲ್ ಹಾಗೂ ಅವರ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಬೆಂಗಳೂರಿನ ಪಿಎಂಎಲ್‌ಎ ವಿಶೇಷ ಕೋರ್ಟ್‌ಗೆ ಚಾರ್ಜಶೀಟ್ ಸಲ್ಲಿಸಿದೆ. ಕಬ್ಬಿಣದ ಅದಿರು (iron ore) ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸುಮಾರು 44.09 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸುಮಾರು ₹44 ಕೋಟಿ ಮೌಲ್ಯದ ಕಬ್ಬಿಣದ ಅದಿರು ಅಕ್ರಮ ರಫ್ತು ಸಂಬಂಧ 2010ರಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಬಳಿಕ ಇ.ಡಿ. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಬಳ್ಳಾರಿಯಿಂದ ಬೇಲೆಕೇರಿ ಬಂದರಿಗೆ ಸುಮಾರು 8 ಲಕ್ಷ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಇ.ಡಿ.ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬಂಧಿಸಿದ್ದರು.
ಇದೀಗ ಸತೀಶ್ ಸೈಲ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕರಾಗಿದ್ದು, ಈ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ ಕಂಪನಿಗೆ 27 ಕೋಟಿ ರೂಪಾಯಿ ಲಾಭವಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅಷ್ಟೇ ಅಲ್ಲದೇ ಸೈಲ್ ಬ್ಯಾಂಕ್ ವಿವರಗಳನ್ನೂ ಇ.ಡಿ ಪ್ರಸ್ತಾಪಿಸಿದ್ದು, ಸೈಲ್ ವಿದೇಶದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಹಾಂಕಾಂಗ್ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಐಸಿಬಿಸಿ ಬ್ಯಾಂಕ್ ಹಾಂಕಾಂಗ್‌ನಲ್ಲಿ ಸತೀಶ್ ಸೈಲ್ ಖಾತೆಗಳನ್ನು ಹೊಂದಿದ್ದಾರೆ. ನೈಜ ಚೀನಾ ಖರೀದಿದಾರರಿಗೆ ರಪ್ತು ಮಾಡದೇ, ಮಧ್ಯದಲ್ಲಿ ವಿದೇಶಿ ಕಂಪನಿ ಮೂಲಕ ಅಪರಾಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಏನಿದು ಅಕ್ರಮ ಗಣಿಗಾರಿಕೆ ಪ್ರಕರಣ?
2010ರಲ್ಲಿ ಬೇಲೇಕೇರಿ ಬಂದರಿನಲ್ಲಿ ನಡೆದಿದ್ದ ಕಬ್ಬಿಣದ ಅದಿರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ನಡೆದಿತ್ತು. ಈ ಪ್ರಕರಣದಲ್ಲಿ ಸುಮಾರು 200 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿತ್ತು. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿತ್ತು. ಆಗಸ್ಟ್ 13 ಮತ್ತು 14ರಂದು ಇ.ಡಿ. ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರ ಮನೆ, ಕಚೇರಿ, ದೆಹಲಿ ಹಾಗೂ ಗೋವಾ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.