ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chennamma Death: ಕಷ್ಟದ ಸಮಯದಲ್ಲಿ ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತಿದ್ದ ಚೆನ್ನಮ್ಮ

ಚೆನ್ನಮ್ಮ ಅವರು ರಾಜಕೀಯದ ಗೋಜಿಗೆ ಹೋಗದೆ, ದೇವೇಗೌಡರ ರಾಜಕೀಯ ಏಳು-ಬೀಳುಗಳಲ್ಲಿ ಮತ್ತು ಸಾಂಸಾರಿಕ ಜೀವನದಲ್ಲಿ ಜೊತೆಯಾಗಿ ನಿಂತು ಕುಟುಂಬವನ್ನು ನಿರ್ವಹಿಸಿದವರು. ಪತ್ನಿಯ ತ್ಯಾಗ ಮತ್ತು ತಾಳ್ಮೆಯನ್ನು ಸ್ವತಃ ದೇವೇಗೌಡರು ಹಲವು ಸಂದರ್ಭಗಳಲ್ಲಿ ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಜೀವನದ ಪ್ರತಿಯೊಂದು ಹಂತದಲ್ಲೂ ಮಾಜಿ ಪ್ರಧಾನಿ ದೇವೇಗೌಡರಿಗೆ ಶಕ್ತಿಯಾಗಿ ನಿಂತಿದ್ದ ಚೆನ್ನಮ್ಮ ಅವರ ಕುರಿತ ಹಲವು ಕುತೂಹಲ ಸಂಗತಿಗಳು ಹೊರಬೀಳುತ್ತಿವೆ.

ಚೆನ್ನಮ್ಮ ಅವರು ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯಲ್ಲಿ ಜನಿಸಿದರು. ಹಳೆಕೋಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. 1954ರಲ್ಲಿ ಎಚ್.ಡಿ. ದೇವೇಗೌಡರ ಅವರ ಜತೆ ವಿವಾಹ ನಡೆಯಿತು. ಈ ದಂಪತಿಗೆ ಎಚ್. ಡಿ. ಬಾಲಕೃಷ್ಣಗೌಡ, ಎಚ್. ಡಿ. ರೇವಣ್ಣ, ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರಮೇಶ್ ಹಾಗೂ ಪುತ್ರಿಯರಾದ ಅನಸೂಯ ಮತ್ತು ಶೈಲಜಾ ಸೇರಿ ಆರು ಮಕ್ಕಳಿದ್ದಾರೆ.

ಚೆನ್ನಮ್ಮ ಅವರು ರಾಜಕೀಯದ ಗೋಜಿಗೆ ಹೋಗದೆ, ದೇವೇಗೌಡರ ರಾಜಕೀಯ ಏಳು-ಬೀಳುಗಳಲ್ಲಿ ಮತ್ತು ಸಾಂಸಾರಿಕ ಜೀವನದಲ್ಲಿ ಜೊತೆಯಾಗಿ ನಿಂತು ಕುಟುಂಬವನ್ನು ನಿರ್ವಹಿಸಿದವರು. ದೇವೇಗೌಡರು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಚೆನ್ನಮ್ಮ ಅವರು ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಗಂಡನಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದರು. ಇವರ ತ್ಯಾಗ ಮತ್ತು ತಾಳ್ಮೆಯನ್ನು ಸ್ವತಃ ದೇವೇಗೌಡರು ಹಲವು ಸಂದರ್ಭಗಳಲ್ಲಿ ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ.

ಇನ್ನು ಜೀವನದ ಪ್ರತಿ ಹಂತದಲ್ಲೂ ದೇವೇಗೌಡರಿಗೆ ಹೆಜ್ಜೆಗೆ ಹೆಜ್ಜೆಯಾಗಿ ನಿಂತ ಪತ್ನಿಯನ್ನು ಕಂಡರೆ ದೇವೇಗೌಡರಿಗೆ ಅಗಾಧವಾದ ಪ್ರೀತಿ. ಇಳಿ ವಯಸ್ಸಿನಲ್ಲೂ ದೇವಸ್ಥಾನ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕಿದ್ದರೂ ಅವರು ಒಟ್ಟಿಗೆ ಓಡಾಡುತ್ತಿದ್ದರು. ಕೊನೆ ಹಂತದಲ್ಲಿ ಪತ್ನಿಯನ್ನು ಖುದ್ದು ದೇವೇಗೌಡ ಅವರೇ ಆಸ್ಪತ್ರೆಗೆ ದಾಖಲಿಸಿದ್ದರು.

ಚೆನ್ನಮ್ಮ ತ್ಯಾಗ ಸ್ಮರಿಸಿ ಕಣ್ಣೀರಿಟ್ಟಿದ್ದ ದೇವೇಗೌಡ:

ನನ್ನ ಶ್ರೀಮತಿ ಚೆನ್ನಮ್ಮ ಎಲ್ಲಾ ಹಂತದಲ್ಲಿಯೂ ನನ್ನ ಜತೆ ನಿಂತಿದ್ದಾರೆ. ಕಷ್ಟದ ಸಮಯದಲ್ಲಿ ನನ್ನ ಗೌರವವನ್ನು ಉಳಿಸಿದ್ದಾರೆ, ನನ್ನ ಬೆಳವಣಿಗೆಗೆ ಅವರ ಸಾಕಷ್ಟು ಕೊಡುಗೆ ಇದೆ ಎಂದು ಕಾರ್ಯಕ್ರಮವೊಂದಲ್ಲಿ ದೇವೇಗೌಡರು ಸ್ಮರಿಸಿ ಕಣ್ಣೀರಿಟ್ಟಿದ್ದರು.