ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪದ್ಮಶ್ರೀ ಪುರಸ್ಕೃತ ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಸೂಕ್ತ ಜಾಗ, ಕಟ್ಟಡ ವ್ಯವಸ್ಥೆಗೆ ಸಿಎಂ ಸೂಚನೆ

Ankegowda M: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಸೋಮವಾರ ಭೇಟಿ ಮಾಡಿದ ಅಂಕೇಗೌಡ ಅವರು ಪುಸ್ತಕಗಳಿಗೆ ಸೂಕ್ತ ವ್ಯವಸ್ಥೆಗೆ ಮನವಿ ಮಾಡಿದ್ದಾರೆ. ಈ ವೇಳೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಂಕೇಗೌಡರ ಪುಸ್ತಕ ಮನೆಗೆ ಸೂಕ್ತ ಜಾಗ ಹುಡುಕಿ, ಸುಸಜ್ಜಿತ ಕಟ್ಟಡ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತ, ಪುಸ್ತಕ ಪ್ರೇಮಿ ಎಂ.ಅಂಕೇಗೌಡಗೆ ಸಿಎಂ ಡಿ.ಕೆ.ಶಿವಕುಮಾರ್‌ ಸನ್ಮಾನ.

ಬೆಂಗಳೂರು, ಜೂ.22: “ಪದ್ಮಶ್ರೀ ಪುರಸ್ಕೃತ, ಪುಸ್ತಕ ಪ್ರೇಮಿ ಎಂದು ಹೆಸರಾಗಿರುವ ಎಂ ಅಂಕೇಗೌಡ (Ankegowda M) ಅವರ ಸಂಗ್ರಹದಲ್ಲಿರುವ 20 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳಿಗೆ ಸೂಕ್ತ ಜಾಗ ಹುಡುಕಿ, ಸುಸಜ್ಜಿತ ಕಟ್ಟಡ ವ್ಯವಸ್ಥೆ ಮಾಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಸೋಮವಾರ ಭೇಟಿ ಮಾಡಿದ ಅಂಕೇಗೌಡ ಅವರು ಪುಸ್ತಕಗಳಿಗೆ ಸೂಕ್ತ ವ್ಯವಸ್ಥೆಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀಯುತರನ್ನು ಸಿಎಂ ಸನ್ಮಾನಿಸಿದರು.

_Ankegowda (1)

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ʼಅಂಕೇಗೌಡ ಜ್ಞಾನ ಪ್ರತಿಷ್ಠಾನ'ದ ಮೂಲಕ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ ಅಂಕೇಗೌಡರು, “ದೇಶದ ಅತಿದೊಡ್ಡ ಪರ್ಸನಲ್ ಲೈಬ್ರರಿ ಇದಾಗಿದ್ದು, ನೀವು ಸೂಕ್ತ ಕಟ್ಟಡ ವ್ಯವಸ್ಥೆ ಮಾಡಿದರೆ ಮಕ್ಕಳಿಗೆ ಅರಿವಿನ ತಾಣವಾಗಿ ಮಾರ್ಪಾಡಗಲಿದೆ. ಸಂಗ್ರಹದಲ್ಲಿರುವ ಅಪರೂಪದ ಪುಸ್ತಕಗಳು ಅತ್ಯುತ್ತಮ ದಾಖಲೆಗಳು" ಎಂದು ಹೇಳಿದರು.

ಇದೇ ವೇಳೆ ತಮ್ಮ ಬಳಿ ಇರುವ ಅಪರೂಪದ ನಾಣ್ಯಗಳು, ಅಂಚೆ ಚೀಟಿಗಳನ್ನು ಮುಖ್ಯಮಂತ್ರಿಯವರಿಗೆ ತೋರಿಸಿ ಅದರ ಬಗ್ಗೆ ವಿವರಣೆ ನೀಡಿದರು. ಅಪರೂಪದ ವಸ್ತುಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಕುತೂಹಲದಿಂದ ವೀಕ್ಷಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದರು.

ರಾಜ್ಯದ ಶತಾವಧಾನಿ ಡಾ. ಆರ್. ಗಣೇಶ್, ಅಂಕೇಗೌಡ ಎಂ, ಡಾ. ಎಸ್. ಜಿ. ಸುಶೀಲಮ್ಮಗೆ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಪ್ರದಾನ

'ಪುಸ್ತಕದ ಮನೆ' ಮೂಲಕ ಜ್ಞಾನ ದಾಸೋಹ ಮಾಡುತ್ತಿರುವ ಅಂಕೇಗೌಡ

ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸಿದ್ಧ ಪುಸ್ತಕಪ್ರೇಮಿ ಹಾಗೂ ಜ್ಞಾನ ಸಂರಕ್ಷಕರಾದ ಅಂಕೇಗೌಡ ಎಂ. ಅವರು ಪುಸ್ತಕಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಸಾರ್ವಜನಿಕರಿಗೆ ಉಚಿತ ಜ್ಞಾನ ಪ್ರಸಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರು ಕಳೆದ 50 ವರ್ಷಗಳಲ್ಲಿ ತಮ್ಮ ಸಂಪೂರ್ಣ ವೈಯಕ್ತಿಕ ಗಳಿಕೆಯನ್ನು ವಿನಿಯೋಗಿಸಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇವರ ಈ ಬೃಹತ್ ಸಂಗ್ರಹದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ ಭಾಷೆಗಳ ಪುಸ್ತಕಗಳಿವೆ. ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿ, ತತ್ತ್ವಶಾಸ್ತ್ರ, ಅಧ್ಯಾತ್ಮ, ಸಂಗೀತ, ಭೂಗೋಳ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಂತಹ ವೈವಿಧ್ಯಮಯ ವಿಷಯಗಳ ಅಪರೂಪದ ಗ್ರಂಥಗಳು ಇಲ್ಲಿವೆ. ಇವರ ನಿವಾಸವೇ ಇಂದು "ಪುಸ್ತಕ ಮನೆ" ಎಂದು ಪ್ರಸಿದ್ಧಿ ಪಡೆದಿದ್ದು, ಇದು ಸಾರ್ವಜನಿಕರಿಗೆ ಉಚಿತ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುತ್ತಿದೆ.