ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತದ ಮೃತರಿಗೆ ಸಿಎಂ ಡಿಕೆಶಿ ಸಂತಾಪ; ಐವರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ತರಲು ಕ್ರಮದ ಭರವಸೆ

Uttarakhand helicopter crash: ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅಗಲಿದವರ ಕುಟುಂಬಸ್ಥರಿಗೆ ಈ ಅಪಾರ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಮೃತದೇಹಗಳನ್ನು ಆದಷ್ಟು ಬೇಗ ಕರ್ನಾಟಕಕ್ಕೆ ತರಲು ಉತ್ತರಾಖಂಡದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು: ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ (Uttarakhand helicopter crash) ಮೃತಪಟ್ಟವರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಐವರು ಕನ್ನಡಿಗೆ ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ಚಾರ್‌ಧಾಮ್ ಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು, ದೆಹಲಿ ಮೂಲದ ಪೈಲಟ್ ಹಾಗೂ ಕರ್ನಾಟಕದ ಐವರು ಪ್ರಯಾಣಿಕರು ಮೃತಪಟ್ಟಿರುವ ಸುದ್ದಿ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ.

ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕ್ಯಾಪ್ಟನ್ ಹಿಮಾಂಶು, ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲಂಕೆ, ಪ್ರತಾಪ್ ಬಿ. ನಿಂಗರಾಜು, ಶಂಕರಗೌಡ ವಿ.ಬಿ., ಸುಧೀರ್ ಕೆ. ಹಾಗೂ ಎಚ್‌.ಎಸ್‌. ನಟರಾಜು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅಗಲಿದವರ ಕುಟುಂಬಸ್ಥರಿಗೆ ಈ ಅಪಾರ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಇನ್ನು ಮೃತದೇಹಗಳನ್ನು ಆದಷ್ಟು ಬೇಗ ಕರ್ನಾಟಕಕ್ಕೆ ತರಲು ಉತ್ತರಾಖಂಡದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳೊಂದಿಗೆ ರಾಜ್ಯ ಸರ್ಕಾರ ನಿಂತಿದೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.

ಉತ್ತರಾಖಂಡದ ಅಧಿಕಾರಿಗಳೊಂದಿಗೆ ಮಾತುಕತೆ

​ದುರಂತದ ಮಾಹಿತಿ ದೊರೆಯುತ್ತಿದ್ದಂತೆಯೇ ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಐಟಿಬಿಪಿ, ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪಡೆಗಳ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ​ರಕ್ಷಣಾ ತಂಡಗಳು ಪೈಲಟ್ ಸೇರಿದಂತೆ ಮೃತಪಟ್ಟ ಎಲ್ಲಾ ಆರು ಜನರ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆದಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಜೋಶಿಮಠಕ್ಕೆ ರವಾನಿಸಲಾಗುತ್ತಿದೆ.

​ಮೃತರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಕರ್ನಾಟಕಕ್ಕೆ ತರಲು ಮುಖ್ಯಮಂತ್ರಿಗಳ ಕಚೇರಿ ಹಾಗೂ ಕರ್ನಾಟಕ ವಿಪತ್ತು ಪರಿಹಾರ ಆಯುಕ್ತರು ಉತ್ತರಾಖಂಡ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜೊತೆಗೆ, ದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಕಚೇರಿಯು ಉತ್ತರಾಖಂಡ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸುತ್ತಿದೆ.

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಸೇರಿ ಐವರು ಕನ್ನಡಿಗರ ಸಾವು; ಮೃತರ ಗುರುತು ಪತ್ತೆ

ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ಮತ್ತು ಸಹಾಯವನ್ನು ಒದಗಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಇಲಾಖೆ ಕೆ.ಎಸ್.ಡಿ.ಎಂ.ಎ (KSDMA) ಹಾಗೂ ವಿಪತ್ತು ನಿರ್ವಹಣೆ (DM) ಆಯುಕ್ತರಾದ ಹೊನ್ನಾಂಬ ಎಸ್ ತಿಳಿಸಿದ್ದಾರೆ.