ಬೆಂಗಳೂರು: ಗ್ಯಾರಂಟಿ ಯೋಜನೆಗಳ (Guarantee Schemes) ಒಬ್ಬೇ ಒಬ್ಬ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು. ಆದರೆ, ಅನರ್ಹ ಫಲಾನುಭವಿಗಳು, ಯೋಜನೆಯ ದುರುಪಯೋಗಕ್ಕೆ ಮಾತ್ರ ಬ್ರೇಕ್ ಹಾಕಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಸಿಎಂ ಮಾತನಾಡಿದ್ದಾರೆ.
ಹಲವು ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಹೋದ ತಕ್ಷಣ ಆ ಹಣ ಸಾಲದ ಮೊತ್ತಕ್ಕೆ ಜಮೆ ಆಗಿಬಿಡುತ್ತದೆ. ಆದ್ದರಿಂದ ಅಂತಹ ಫಲಾನುಭವಿಗಳು ಖಾತೆ ಬದಲಾಯಿಸಿರುತ್ತಾರೆ. ಇಂಥಾ ಫಲಾನುಭವಿಗಳಿಗೆ ತೊಂದರೆ ಆಗಬಾರದು.
ಗೃಹ ಜ್ಯೋತಿ ಯೋಜನೆ ಜಾರಿ ಆಗುವಾಗ ಹೆಚ್ಚಿನ ದುರುಪಯೋಗ ಆಗದ ಹಾಗೆ ಎಚ್ಚರಿಕೆ ವಹಿಸಲಾಗಿತ್ತು. ಇದೇ ಎಚ್ಚರಿಕೆ ಇತರೆ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು. ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದನ್ನು ಪತ್ತೆಯಾಗಿದೆ. ಈ ರೀತಿ ದುರುಪಯೋಗ ಆಗಬಾರದು. ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲಿಗೆ ವಾಯ್ಸ್ ಮೆಸ್ಸೇಜ್ ಮೂಲಕ ಖಚಿತಪಡಿಸಬೇಕು ಎಂದು ತಿಳಿಸಿದ್ದಾರೆ.
ಏರ್‌ಟೆಲ್ ಬ್ಯಾಂಕ್‌ನಲ್ಲಿ ಯುಪಿಎ ಖಾತೆಗಳನ್ನು ತೆಗೆದು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎನ್ನುವ ಬಗ್ಗೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿರುವ ಸಿಎಂ, ಖಾತೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇರಬೇಕು. ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೆ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಇವುಗಳಿಗೆ ತಡೆ ಹಾಕಬೇಕು. ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಇತರೆ ರಾಜ್ಯದ ಮತದಾರರಿಗೆ ಯೋಜನೆಯ ಲಾಭ ಆಗುತ್ತಿದೆ. ಇದನ್ನು ತಡೆಯಬೇಕು.
ಅನುಕೂಲಸ್ಥರು ಯಾರಾದರೂ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವ ಮೂಲಕ ಇತರೆ ಅರ್ಹ ಫಲಾನುಭವವಿಗಳಿಗೆ ನೆರವಾಗಲು ಮುಂದಾದರೆ ಅಂಥವರನ್ನು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದ್ದಾರೆ.
ಕೇಂದ್ರದ ನೀತಿಗಳಿಂದ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ, ಬೆಲೆ ಏರಿಕೆಯ ಪರಿಣಾಮಗಳು ಮತ್ತು ತಲಾ ಆದಾಯ ಕುಸಿಯುತ್ತಿರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿ ಬರುತ್ತಿರುವ ಎರಡು ಪ್ರಮುಖ ತಾಂತ್ರಿಕ ಸಮಸ್ಯೆಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಲಾಯಿತು.
ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಸಕಾಲದಲ್ಲಿ ದೊರೆಯದಿರುವ ಬಗ್ಗೆ ಇ-ಕೆವೈಸಿ ಹಾಗೂ ಬ್ಯಾಂಕ್ ಖಾತೆ/ಎನ್.ಪಿ.ಸಿ.ಐ ನಿಷ್ಕ್ರಿಯವಾಗಿರುವ ಫಲಾನುಭವಿಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಅಕೌಂಟೆಟ್ ಜನರಲ್ ವರದಿಯಲ್ಲಿ ಉಲ್ಲೇಖವಾಗಿರುವ ಸಂಗತಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಹೋಗಿದೆ ಎನ್ನುವ ಬಗ್ಗೆ ಎಜಿ ಅವರ ವರದಿ ಬಂದಿದೆ. ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿರುವುದನ್ನು ಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಹಿಂದೆ ಪಡೆದ ಅರ್ಜಿಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ನೈಜತೆ ಬಗ್ಗೆ ಪರಿಶೀಲನೆ ನಡೆಸದಿರುವ ಬಗ್ಗೆ ಪ್ರಸ್ತಾಪಸಲಾಯಿತು.
''ವಿಪಕ್ಷಗಳ ಗ್ಯಾರಂಟಿ ವಿರೋಧಿ ನೀತಿಗೆ ಅವರ ಶಾಸಕರಿಂದಲೇ ಉತ್ತರ'': ರಣದೀಪ್ ಸುರ್ಜೇವಾಲಾ
ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ. ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.