ಬೆಂಗಳೂರು, ಜು.20: ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಚಾಲನೆ ನೀಡಿದರು. ಇದೇ ವೇಳೆ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯ ವೆಬ್ ಸೈಟ್ ಹಾಗೂ ವಾಟ್ಸ್ ಆ್ಯಪ್ ಸೇವೆಗೆ ಕೂಡ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಒದಗಿಸಿಕೊಟ್ಟು ಅವರ ಹಕ್ಕು ಸಂರಕ್ಷಿಸಲು ಸದಾ ಮುಂಚೂಣಿಯಲ್ಲಿರುವ ರಾಜ್ಯ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನೆ ಬಾಗಿಲಿಗೆ ಪಹಣಿ ನೀಡುವ ಮೂಲಕ ಹೊಸ ಹೆಜ್ಜೆ ಇಟ್ಟಿತ್ತು. ನಾನು ಮುಖ್ಯಮಂತ್ರಿಯಾಗುವ ಮುನ್ನ ಹಾಗೂ ನಂತರವೂ "ನಿಮ್ಮ ಮತ ನಿಮ್ಮ ಹಕ್ಕು," ನಿಮ್ಮ ಮತ- ನಿಮ್ಮ ಬದುಕು" ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ ಎನ್ನುವುದು ನಮ್ಮ ಮಂತ್ರ ಹಾಗೂ ತತ್ವವಾಗಿದೆ ಎಂದರು.
ಐತಿಹಾಸಿಕ ಅಭಿಯಾನ
ಭಾರತದಲ್ಲಿಯೇ ಶಾಶ್ವತವಾದ ಪ್ರಮಾಣ ಪತ್ರವನ್ನು ಉಚಿತವಾಗಿ ಮನೆ ಮನೆಗೆ ತೆರಳಿ ಪ್ರಮಾಣ ಪತ್ರವನ್ನು ನೀಡಲಾಗುವ ಐತಿಹಾಸಿಕ ಅಭಿಯಾನವನ್ನು ಸರ್ಕಾರ ಕೈಗೊಂಡಿದೆ. ಮತದಾರರ ಪಟ್ಟಿಗೆ ಸೇರಲು ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದಾದ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡುವ ಐತಿಹಾಸಿಕ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.
ದೇಶದಲ್ಲಿಯೇ 4.85 ಕೋಟಿ ಕುಟುಂಬಗಳಿಗೆ ಈ ದಾಖಲೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎನ್ನುವುದು ನಮ್ಮ ಹೆಮ್ಮೆ ಎಂದರು. ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳನ್ನು ಚಾಚೂ ತಪ್ಪದೆ ಸರ್ಕಾರ ಪಾಲಿಸುತ್ತಿದೆ. ರಾಜ್ಯದ ನಿವಾಸಿಗಳಿಗೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ. ಇದನ್ನು ಪಕ್ಷಾತೀತವಾಗಿ ನಾವು ಜವಾಬ್ದಾರಿಯಿಂದ ಕೈಗೊಂಡಿದ್ದೇವೆ ಎಂದರು. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರುವವರಿದ್ದು, ಆದರೆ ಜನರಿಗೆ ನೆರವಾಗುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಅರ್ಜಿಗಳನ್ನು ಆನ್ ಲೈನ್ ಮೂಲಕ, ಸೇವಾ ಕೇಂದ್ರಗಳಲ್ಲಿ, ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ facilitation centre ಗಳಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನನ್ನ ಮತ್ತು ಉಪಮುಖ್ಯಮಂತ್ರಿಗಳ ಭಾವಚಿತ್ರವಿರುವ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. BLO ಗಳು ನೀಡುವ ಅರ್ಜಿಗಳನ್ನು ಭರ್ತಿ ಮಾಡಿ ಅವರಿಗೆ ತಲುಪಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಐದು ಗ್ಯಾರಂಟಿಗಳ ಜತೆ ಭೂಮಿ ಗ್ಯಾರಂಟಿಯನ್ನೂ ನೀಡುತ್ತಿದ್ದು, ಇದರ ಜತೆಗೆ ರಾಜ್ಯದಲ್ಲಿ ವಿಶೇಷ ಆಂದೋಲನವನ್ನು ಸರ್ಕಾರ ಕೈಗೊಂಡು ಮತದಾನದ ಗ್ಯಾರಂಟಿಯನ್ನು ಜಾರಿಗೊಳಿಸಿದ್ದೇವೆ ಎಂದರು.
ಆಡಳಿತ ವ್ಯವಸ್ಥೆಯಲ್ಲಿಯೇ ಕರ್ನಾಟಕ ಸರ್ಕಾರ ಕೈಗೊಂಡಿರುವ ಐತಿಹಾಸಿಕ ಹೆಜ್ಜೆ
ಜನರ ಬದುಕಿಗೆ ನೇರವಾಗಿ ಸಹಾಯ ಮಾಡುವುದು ಹಾಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿಯೇ ಕರ್ನಾಟಕ ಸರ್ಕಾರ ಕೈಗೊಂಡಿರುವ ಐತಿಹಾಸಿಕ ಹೆಜ್ಜೆ ಇದಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅಭಿಯಾನದ ಮೂಲಕ ಜನರ ಸೌಲಭ್ಯಗಳನ್ನು ನೇರವಾಗಿ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ. ಸರ್ಕಾರ ಮತ್ತು ಜನರ ನಡುವಿನ ಅಂತರ ನಿವಾರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಹಾಗೂ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬ ದೃಷ್ಟಿಯಿಂದ ಈ ಕಾರ್ಯವನ್ನು ಕೈಗೊಂಡಿದೆ ಎಂದರು.
Cabinet meeting: ಬರ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮನೀಶ್ ಮೌದ್ಗಿಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.