ಬೆಂಗಳೂರು: ರಾಜ್ಯಾದ್ಯಂತ ನವರಾತ್ರಿ ಅಂಗವಾಗಿ ಮಂಗಳವಾರ ಆಯುಧ ಪೂಜೆ (Ayudha Puja 2026) ಸಂಭ್ರಮ ಮನೆಮಾಡಿದೆ. ಅದೇ ರೀತಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು (CM DK Shivakumar) ಸದಾಶಿವನಗರದ ನಿವಾಸದಲ್ಲಿ ಪತ್ನಿ ಉಷಾ ಅವರು ಸೇರಿ ಕುಟುಂಬ ಸದಸ್ಯರ ಜತೆ ಮಂಗಳವಾರ ಆಯುಧ ಪೂಜೆ ನೆರವೇರಿಸಿದರು.

ಇನ್ನು ನಾಡಿದ ಜನತೆಗೆ ಆಯುಧ ಪೂಜೆಯ ಶುಭಾಶಯ ಕೋರಿರುವ ಸಿಎಂ ಅವರು, ಕಾಯಕವೇ ಕೈಲಾಸ. ನಮ್ಮ ದಿನನಿತ್ಯದ ಕಾಯಕಕ್ಕೆ ನೆರವಾಗುವ ವಾಹನ, ಯಂತ್ರೋಪಕರಣ, ಪುಸ್ತಕ ಮತ್ತು ಸಾಧನಗಳಿಗೆ ಭಕ್ತಿಯಿಂದ ಕೃತಜ್ಞತೆ ಸಲ್ಲಿಸುವ ಶುಭ ದಿನವಿದು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು, ಸುಖ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಹೇಳಿದ್ದಾರೆ.

ಇಂದು ಸದಾಶಿವನಗರದ ನಿವಾಸದಲ್ಲಿ ಕುಟುಂಬ ಸಮೇತರಾಗಿ ಆಯುಧ ಪೂಜೆ ನೆರವೇರಿಸಿ, ನಮ್ಮ ದೈನಂದಿನ ಬದುಕಿನ ಭಾಗವಾಗಿರುವ ಪ್ರತಿಯೊಂದು ವಸ್ತುವಿಗೂ ಕೃತಜ್ಞತೆ ಸಲ್ಲಿಸಲಾಯಿತು. ಈ ಪವಿತ್ರ ಹಬ್ಬವು ಎಲ್ಲರ ಬಾಳಿನಲ್ಲೂ ಹೊಸ ಚೈತನ್ಯ ತರಲಿ. ಕಾಯಕವೇ ಕೈಲಾಸ ಎಂಬಂತೆ ಪ್ರತಿಯೊಬ್ಬರ ಶ್ರಮಕ್ಕೂ ತಕ್ಕ ಪ್ರತಿಫಲ ದೊರೆಯಲಿ. ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯು ರಾಜ್ಯದ ಸಮಸ್ತ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.