ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

AI Education: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಐ ತರಬೇತಿ ನೀಡಲು ಗೂಗಲ್ ಕಂಪನಿ ಆಸಕ್ತಿ: ಸಿಎಂ

ಸಿಎಂ ಡಿ.ಕೆ.ಶಿವಕುಮಾರ್‌ ಅವರು ನೇಮಕಾತಿ ಹಾಗೂ ಆದ್ಯತೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಲು ಸೂಚಿಸಲಾಗಿದ್ದು, 956 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿಗಳ 100 ದಿನಗಳ ಕಾರ್ಯ, ನೇಮಕಾತಿ ಹಾಗೂ ಆದ್ಯತೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ (CM DK Shivakumar) ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಸಿಎಂ ಅವರಿಂದ ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಅಧಿಕಾರಿಗಳಿಗೆ ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಕೃಷಿ ಇಲಾಖೆ:

  • ಮುಖ್ಯಮಂತ್ರಿ ರೈತ ಚೈತನ್ಯ ಅಗ್ರಿಟೆಕ್ ಮಿಷನ್ ಯೋಜನೆ ವಿಚಾರವಾಗಿ ರೈತರಿಗೆ 25 ಲಕ್ಷ SMS ಕಳುಹಿಸಲಾಗಿದೆ. ಇದರ ಜೊತೆ ರೈತರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಿಯೋ ಸಂದೇಶ ಕಳುಹಿಸಲು ಸೂಚನೆ.
  • ಚಾಟ್ ಬಾಟ್ ಸಂಯೋಜನೆ ಪ್ರಗತಿಯಲ್ಲಿದ್ದು, ಡ್ರೋನ್ / ಉಪಗ್ರಹ ಆಧಾರಿತ ಬೆಳೆ ಅಂದಾಜು ನಡೆಸಲು ಮತ್ತು ಡಿಜಿಟಲ್ ಬೆಳೆ ಸಮೀಕ್ಷೆ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತದೆ.
  • ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ಮೂಲಕ ಕೃಷಿ ಯಾಂತ್ರೀಕರಣ ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ JFarm App ಸಿದ್ಧವಾಗಿದೆ. 2.5 ಲಕ್ಷ ಜನ ಸೇವೆ ಒದಗಿಸಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ನವೆಂಬರ್ 1 ರಿಂದ ಸೇವೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ.
  • ಮಾರ್ಚ್ 2027ರ ಅಂತ್ಯದೊಳಗೆ 2000 ರೈತರಿಗೆ ರಫ್ತುದಾರರಾಗಲು ತರಬೇತಿ, ಪ್ರಮಾಣೀಕರಣದ ಬಗ್ಗೆ ಮಾರ್ಗದರ್ಶನ ನೀಡಿ ಸಿದ್ಧಗೊಳಿಸುವ ಗುರಿ ಹೊಂದಲಾಗಿದೆ.
  • ಸಮೂಹ ಕೃಷಿ (group farming) ಕೈಗೊಳ್ಳಲು ರೈತರನ್ನು ಉತ್ತೇಜಿಸಬೇಕು ಹಾಗೂ ವೈಜ್ಞಾನಿಕ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಮಾರ್ಗದರ್ಶನ ನೀಡಬೇಕು. ಪುಷ್ಪೋದ್ಯಮಕ್ಕೆ ಉತ್ತೇಜನ ನೀಡಲು ಸೂಚಿಸಲಾಗಿದ್ದು, ಮಾರುಕಟ್ಟೆಗೆ ಕನಿಷ್ಠ 5 ಎಕರೆ ಸ್ಥಳ ಗುರುತಿಸಲು ಸೂಚನೆ ನೀಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆ

  • ನಗರ ಪ್ರದೇಶದ 941 ಶಾಲೆಗಳ ಒಂಬತ್ತನೇ ಮತ್ತು 11 ನೇ ತರಗತಿ ವಿದ್ಯಾರ್ಥಿಗಳನ್ನು ಪ್ರಗತಿ ಪರ ರೈತರ ಹೊಲಕ್ಕೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ.
  • ವಿದ್ಯಾರ್ಥಿಗಳು ಹಳ್ಳಿಯಲ್ಲಿ ರಾತ್ರಿ ಉಳಿಯಲು ಸಮುದಾಯ ಭವನ, ಹಾಸ್ಟೆಲುಗಳಲ್ಲಿ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.
  • ಖಾಸಗಿ ಶಾಲೆಗಳೂ ಕಡ್ಡಾಯವಾಗಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚನೆ. ಡಿಸೆಂಬರ್ ಒಳಗೆ ಇದನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.
  • ಜಿಲ್ಲಾಧಿಕಾರಿಗಳಿಗೇ ಕೆಪಿಎಸ್ ಶಾಲೆಗಳ ಡಿಪಿಆರ್ ಅನುಮೋದನೆ, ಟೆಂಡರ್ ಕರೆಯಲು ಅನುಮೋದನೆ ನೀಡುವ ಮೂಲಕ ಅನುಷ್ಠಾನ ಪ್ರಕ್ರಿಯೆ ಸರಳಗೊಳಿಸಲಾಗಿದೆ.
  • ನವೆಂಬರ್ 14 ರೊಳಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ. ಸಿಎಸ್ಆರ್ ಅಡಿ 100 ಕೆಪಿಎಸ್ ಅಭಿವೃದ್ಧಿ ಕೈಗೊಳ್ಳಲು ಉದ್ದೇಶಿಸಿದ್ದು, 60 ಶಾಲೆಗಳ ಅಭಿವೃದ್ಧಿಗೆ ಕಂಪನಿಗಳು ಆಸಕ್ತಿ ತೋರಿದ್ದಾರೆ.
  • ಸರ್ಕಾರಿ ಶಾಲೆಗಳಲ್ಲಿ 9 ನೇ ತರಗತಿಯಲ್ಲಿ AI ತರಬೇತಿ ಪ್ರಾರಂಭಿಸಲಾಗಿದ್ದು, ಆರನೇ ತರಗತಿಯಿಂದ ಪ್ರಾರಂಭಿಸುವ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಖಾಸಗಿ ನೆರವು ಪಡೆಲು ಸೂಚಿಸಲಾಗಿದೆ.
  • ಗೂಗಲ್ ಕಂಪನಿಯವರು ಶಾಲೆಗಳಲ್ಲಿ ಎಐ ತರಬೇತಿ ನೀಡಲು ಆಸಕ್ತಿ ವಹಿಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿಯೂ ಈ ಕಂಪನಿಯು ಎಐ ತರಬೇತಿ ಪ್ರಾರಂಭಿಸಿದೆ. ಈ ಕುರಿತೂ ಪರಿಶೀಲಿಸಲು ಸೂಚನೆ.
  • ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಲು ಸೂಚಿಸಲಾಗಿದ್ದು, 956 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ.

ಪಶು ಸಂಗೋಪನೆ ಇಲಾಖೆ:

  • ಪ್ರೊಟೀನ್ ಮಿಷನ್ ಅಡಿಯಲ್ಲಿ ಚಾಮರಾಜನಗರ, ಚಿತ್ರದುರ್ಗ, ಹಾವೇರಿ ಮತ್ತು ಕೊಪ್ಪಳದಲ್ಲಿ ನಾಲ್ಕು ಪ್ರೊಟೀನ್ ಪಾರ್ಕ್ ಅಭಿವೃದ್ಧಿ ಮಾಡುವುದು.
  • ಜಾನುವಾರು ಮತ್ತು ಕುಕ್ಕುಟ ಉತ್ಪಾದನೆ ಉತ್ತೇಜನ, ಮೊಟ್ಟೆ ಉತ್ಪಾದನೆ 1058 ಕೋಟಿ ರೂ. ನಿಂದ 1137 ಕೋಟಿಗೆ ಹೆಚ್ಚಿಸುವುದು.
  • ವಿದ್ಯುತ್ ಸಮಸ್ಯೆ ನಿವಾರಿಸಲು ಸೋಲಾರ್ ಅಳವಡಿಸಲು ಶೇ. 50 ಸಬ್ಸಿಡಿ ನೀಡುವ ಬಗ್ಗೆ ನಾಳೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ.

ಎಂ.ಎಸ್.ಎಂ.ಇ ಮತ್ತು ಜವಳಿ

ಉದ್ಯೋಗ ನಿಧಿ ಯೋಜನೆಗೆ ಈಗಾಗಲೇ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಅತ್ಯಂತ ಹಿಂದುಳಿದ 11 ಜಿಲ್ಲೆಗಳ ಉದ್ಯೋಗದಾತರಿಗೆ ಪ್ರತಿ ಹೊಸ ಕಾರ್ಮಿಕರ ಲೆಕ್ಕದಲ್ಲಿ ಮಾಸಿಕ 2500 ರೂ. ನಂತೆ ಎರಡು ವರ್ಷದವರೆಗೆ ಪ್ರೋತ್ಸಾಹ ಧನ ನೀಡಲಾಗುವುದು.

ಜವಳಿ ನೀತಿ ಕುರಿತು ಸರ್ಕಾರಿ ಆದೇಶ ಹೊರಡಿಸಲಾಗಿದ್ದು, 20 ಸಾವಿರ ಕೋಟಿ ರೂ. ಹೂಡಿಕೆ ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ರೇಷ್ಮೆಯನ್ನು ಜವಳಿ ನೀತಿ ವ್ಯಾಪ್ತಿಗೆ ತರಲಾಗಿದೆ. ಕಲಬುರ್ಗಿ ಪಿಎಂ ಮಿತ್ರ ಜವಳಿ ಪಾರ್ಕ್ ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸಲು ಸೂಚನೆ ನೀಡಲಾಗಿದ್ದು, 2821 ಕೋಟಿ ರೂ. ಮೊತ್ತದ 15 ಯೋಜನಾ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕೆ:

100 ದಿನಗಳಲ್ಲಿ 25,000 ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿತ್ತು. ಈಗಾಗಲೇ 43,214 ಕೋಟಿ ರೂ. ಮೌಲ್ಯದ 150 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. 2027 ರ ಮಾರ್ಚ್ ತಿಂಗಳ ವರೆಗೆ 50,000 ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿದೆ. 200 ಕೈಗಾರಿಕೆಗಳಿಂದ 1 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ.

ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗೆ ಹೂಡಿಕೆ ಉತ್ತೇಜನ ಪ್ಯಾಕೇಜ್ ಕುರಿತು ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ವರ್ಷಕ್ಕೆ 200 ಕೋಟಿ ರೂ. ಸಹಾಯಧನ ನೀಡಲಾಗುವುದು. ಆ ಮೂಲಕ ಹಿಂದುಳಿದ ಪ್ರದೇಶಗಳಲ್ಲಿ ಸುಮಾರು ಸಾವಿರ ಕೋಟಿ ಹೂಡಿಕೆ ಹಾಗೂ 50,000 ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ. ಇವುಗಳ ಅನುಷ್ಠಾನಕ್ಕೆ ವೇಳಾಪಟ್ಟಿ ನಿಗದಿ ಪಡಿಸಲು ಸೂಚನೆ.

ಅತ್ಯುತ್ತಮ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ ಗೆ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಜಾರಿಗೊಳಿಸಲಾಗುವುದು.

ಶ್ರಮಿಕ ನಿವಾಸ ನೀತಿ (ಕೆಲಸದ ಸ್ಥಳದ ಸಮೀಪ ವಾಸ):

ಈಗಾಗಲೇ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಹೆಚ್ಚು ಉದ್ಯೋಗ ನೀಡುವ ಕಂಪೆನಿಗಳು ಕೆಲಸದ ಸ್ಥಳದ ಸಮೀಪ ವಸತಿ ಒದಗಿಸಲು ಪ್ರೋತ್ಸಾಹ ನೀಡಲಾಗುವುದು. ಇದಕ್ಕೆ ರಿಯಾಯಿತಿ ದರದ ಜಮೀನು, ಬಂಡವಾಳ ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಘಟಕ ವೆಚ್ಚದ ಶೇ.20, ಪ್ರತಿ ಘಟಕಕ್ಕೆ ಗರಿಷ್ಠ 1 ಲಕ್ಷ ರೂ. ನೀಡಲಾಗುವುದು.

ಸುಧಾರಿತ ಉತ್ಪಾದನಾ ಕ್ಲಸ್ಟರ್:

ದೊಡ್ಡಬಳ್ಳಾಪುರದ 4513 ಎಕರೆ ಪ್ರದೇಶದಲ್ಲಿ ಪ್ರಾರಂಭಿಸಲು ಅಧಿಸೂಚನೆ ಹೊರಡಿಸಲಾಗಿದ್ದು, 2479 ಎಕರೆ ಹಂಚಿಕೆಗೆ ಲಭ್ಯವಿದೆ.

ಜೀನ್ಸ್ ಪಾರ್ಕ್, ಬಳ್ಳಾರಿ:

ಜೀನ್ಸ್ ಪಾರ್ಕ್ ಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ನಿವೇಶನ ಹಂಚಿಕೆ ಮಾಡಲಾಗಿದೆ. 50 ಕೋಟಿ ರೂ. ವೆಚ್ಚದಲ್ಲಿ Common Effluent Treatment Plant (CETP) ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಕೈಗಾರಿಕಾ ಭೂ ಬ್ಯಾಂಕ್ ಡಿಜಿಟಲೀಕರಣ:

ಎಲ್ಲ 228 KIADB ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ನೈಜ ಸಮಯದ GIS ಆಧಾರಿತ ಡಿಜಿಟಲ್ ಆಗಿ ಲಭ್ಯವಿರುವ ಭೂ ಬ್ಯಾಂಕ್ ಪೋರ್ಟಲ್ ಸಿದ್ಧವಾಗಿದೆ. ಈ ಪೋರ್ಟಲ್ ಅನ್ನು ನಾಗರಿಕ ಸ್ನೇಹಿಯನ್ನಾಗಿ ಮಾಡಲು ಸೂಚನೆ.

ದ್ವೀಪ ಪ್ರವಾಸೋದ್ಯಮ:

ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲು ಸೂಚನೆ ನೀಡಲಾಗಿದೆ.

ಅರಣ್ಯ ಇಲಾಖೆ:

ತೇಗದ ಸಿರಿ ಯೋಜನೆಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ರಸ್ತೆ ಬದಿಗಳಲ್ಲಿ 10 ಕೋಟಿ ತೇಗ ಮತ್ತು ಇತರ ಬೆಲೆಬಾಳುವ ಜಾತಿಯ ಸಸಿಗಳನ್ನು ನೆಡುವುದು. ರಸ್ತೆ ಬದಿಗೆ ಹೊಂದಿಕೊಂಡಿರುವ ಜಮೀನಿನ ರೈತರಿಂದ ಈ ಮರಗಳ ಪೋಷಣೆ. ಕಟಾವಿನ ಆದಾಯದಲ್ಲಿ ರೈತರಿಗೆ ಶೇ.70 ರಷ್ಟು ಪಾಲು.

ಈ ಯೋಜನೆ ಜಾರಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ, ತೇಗದ ಸಸಿ ನೆಡುವ ಸ್ಥಳ ಹಾಗೂ ರೈತರನ್ನು ಗುರುತಿಸಲು ಕ್ರಮ. VB GRAM G ಅಡಿ ಈ ಗಿಡ ನೆಡುವುದು ಮತ್ತು ನಿರ್ವಹಣೆ ಮಾಡಲಾಗುವುದು. ಮುಂದಿನ ಮುಂಗಾರಿಗೆ ಸಸಿ ನೆಡಲು ಎಲ್ಲ ಸಿದ್ಧತೆ ನಡೆಸಲು ಸೂಚನೆ ನೀಡಲಾಗಿದೆ. ಈ ಯೋಜನೆಯಲ್ಲಿ ಭಾಗಿಯಾಗುವ ರೈತರಿಗೆ ಪ್ರಮಾಣ ಪತ್ರ ನೀಡುವಂತೆ ಹಾಗೂ ಫೋಟೋ ತೆಗೆದು ದಾಖಲಿಸುವಂತೆ ಸೂಚನೆ.

ಮಾಲಿನ್ಯ ನಿಯಂತ್ರಣ:

ಹೆಚ್ಚಿನ ಸಾಮರ್ಥ್ಯದ ಡಿಸೇಲ್ ಜನರೇಟರ್ಗಳಿಗೆ ಹೊರಸೂಸುವಿಕೆ ನಿಯಂತ್ರಣ ಸಾಧನ (ರೆಟ್ರೋ-ಫಿಟ್ಟಿಂಗ್) ಅಳವಡಿಕೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಹೆಚ್ಚಿನ ಸಾಮರ್ಥ್ಯದ ಎಲ್ಲಾ ಡಿಜಿ ಸೆಟ್ ಗಳನ್ನು 2027ರ ಮಾರ್ಚ್ ಒಳಗಾಗಿ ಇದರ ವ್ಯಾಪ್ತಿಗೆ ತರಬೇಕು. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ನಡೆಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.