ಬೆಂಗಳೂರು, ನ.12: “ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ (SC ST Reservation) ಪ್ರಮಾಣ ಹೆಚ್ಚಿಸಿರುವ ತೀರ್ಮಾನವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಪ್ರಧಾನಮಂತ್ರಿಗಳ ಭೇಟಿ ಸಾಧ್ಯವಾದರೆ ಈ ವಿಚಾರವಾಗಿ ಚರ್ಚೆ ಮಾಡಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ವಿಕಾಸಸೌಧದ ಸಭಾಂಗಣದಲ್ಲಿ ಎಸ್.ಸಿ.ಎಸ್.ಪಿ /ಟಿ.ಎಸ್.ಪಿ ಕಾರ್ಯಕ್ರಮಗಳ 2026-27 ನೇ ಸಾಲಿನ ಕ್ರಿಯಾ ಯೋಜನೆ ಕುರಿತಾದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಗುರುವಾರ ಮಾತನಾಡಿದರು.
ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ
“ಇಂದು ಬೆಳಗ್ಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶಾಸಕರು, ಸಚಿವರು, ವಿವಿಧ ನಿಗಮಗಳ ಅಧ್ಯಕ್ಷರುಗಳನ್ನು ಒಳಗೊಂಡಂತೆ ಸಭೆ ನಡೆಸಿದ್ದು, ನಂತರ ಪರಿಷತ್ತಿನ ಸಭೆ ನಡೆಸಿದ್ದೇನೆ. ಬೆಳಗಿನ ಸಭೆಯಲ್ಲಿ ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದು, ನಮ್ಮ ಅರ್ಜಿ ಸ್ವೀಕೃತಗೊಂಡಿದೆ. ಈ ಕಾನೂನು ಹೋರಾಟದಲ್ಲಿ ಯಾರು ರಾಜ್ಯದ ಪರವಾಗಿ ವಾದ ಮಾಡಬೇಕು ಹಾಗೂ ಈ ಪ್ರಕರಣದ ಮೇಲ್ವಿಚಾರಣೆಗೆ ಡಿಸಿಎಂ ಪರಮೇಶ್ವರ್, ಮುನಿಯಪ್ಪ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
“ಈ ವಿಚಾರದಲ್ಲಿ ಹಿಂದೆ ಇದ್ದವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಬೇರೆ ಕೆಲವು ರಾಜ್ಯಗಳಲ್ಲಿ ಈ ಬಗ್ಗೆ ತೀರ್ಮಾನವಾಗಿದ್ದು, ತಮಿಳುನಾಡಿನಲ್ಲಿ 69% ಮೀಸಲಾತಿ ಇದೆ. 50% ಮಿಸಲಾತಿಗಿಂತ ನಾವು ಕೇವಲ 6% ವಿಸ್ತರಣೆಗೆ ಮನವಿ ಮಾಡುತ್ತಿದ್ದೇವೆ. ನಾವು ಈಗಾಗಲೇ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಿದ್ದು, ಮುಂದಿನ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಬಜೆಟ್ ನಲ್ಲಿ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಈ ಸಮುದಾಯಗಳ ನಾಯಕರ ಬಗ್ಗೆ ಚರ್ಚಿಸಲಾಗಿದೆ. ಈ ವರ್ಗದ ಕಲ್ಯಾಣಕ್ಕೆ ಯಾವ ರೀತಿ ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತೀರ್ಮಾನಿಸಲು ವಿಷನ್ ಗ್ರೂಪ್ ಅನ್ನು ರಚಿಸುತ್ತೇನೆ” ಎಂದು ತಿಳಿಸಿದರು.
ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಪರಿಣಾಮ ಅರಿಯಲು ಸಾಮಾಜಿಕ ಆಡಿಟ್
“ಈ ವಿಚಾರಗಳ ಬಗ್ಗೆ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು, ನಾವು ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಕೆಲವು ಯೋಜನೆಗಳು ಓವರ್ ಲ್ಯಾಪಿಂಗ್ ಆಗುತ್ತಿರುವ ಬಗ್ಗೆ ನಮ್ಮ ನಾಯಕರು ಗಮನಸೆಳೆದಿದ್ದಾರೆ. ಇಷ್ಟು ವರ್ಷಗಳ ಕಾಲ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಮೂಲಕ ನೀಡಿರುವ ಅನುದಾನ ಯಾವ ರೀತಿ ಪರಿಣಾಮ ಬೀರಿದೆ ಎಂದು ಅಧ್ಯಯನ ಮಾಡಲು ಪ್ರತಿಷ್ಠಿತ ಸಂಸ್ಥೆಗಳಿಂದ ಸಾಮಾಜಿಕ ಆಡಿಟ್ ಮಾಡಿಸಲು ತೀರ್ಮಾನಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಮೂಲಕ 2025-26ನೇ ಸಾಲಿನಲ್ಲಿನ 42,503 ಕೋಟಿ ಹಾಗೂ ಪ್ರಸಕ್ತ ಸಾಲಿನ 44,631 ಕೋಟಿಯನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ನಮ್ಮ ಶಾಸಕರು ಹಾಗೂ ಸಚಿವರು ಹೊಸ ಆಲೋಚನೆ, ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರೂ ಸೇರಿದಂತೆ ನಮ್ಮ ಎಸ್ ಸಿ, ಎಸ್ ಟಿ ಶಾಸಕರುಗಳು ಎರಡು ದಿನಗಳ ಕಾಲ ಚರ್ಚೆ ಮಾಡಿ ಏನಾದರೂ ಬದಲಾವಣೆ ಮಾಡಲು ಸಾಧ್ಯವೇ? ಎಂದು ಆರ್ಥಿಕ ಇಲಾಖೆ ಜತೆಗೂಡಿ ಚರ್ಚೆ ಮಾಡಿ ನಮಗೆ ವರದಿ ನೀಡಲಿದ್ದಾರೆ” ಎಂದರು.
“ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯ 44,631 ಕೋಟಿ ಸರಿಯಾದ ರೀತಿಯಲ್ಲಿ ಸೇರಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆಯಾಗಿದ್ದು, ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. 2001ರಿಂದ 2025ರವರೆಗೆ 19,115 ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇದ್ದು, 17,793 ಹುದ್ದೆಗಳು ಭರ್ತಿಯಾಗಿದ್ದು 1574 ಹುದ್ದೆಗಳು ಬಾಕಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ” ಎಂದರು.
“ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾವೇಶ ಮಾಡಲು ಸರ್ಕಾರ ತೀರ್ಮಾನಿಸಿದ್ದು, ನಮ್ಮ ನಾಯಕರು ಚರ್ಚೆ ಮಾಡಿ ಈ ಕಾರ್ಯಕ್ರಮ ಎಲ್ಲಿ ನಡೆಯಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಿದೆ. ಇದು ಐಕ್ಯತಾ ಸಮಾವೇಶವಾಗಿದ್ದು, ನಾವು ಚುನಾವಣೆಗೂ ಮುನ್ನ ಏನು ಮಾತು ನೀಡಿದ್ದೆವು, ನಾವು ಏನೆಲ್ಲಾ ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ” ಎಂದರು.
“ಹಾಸ್ಟೆಲ್ ಹಾಗೂ ಶಾಲಾ ಸಮವಸ್ತ್ರಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಿದ್ದೇವೆ. ಮುಂದಿನ ವರ್ಷದಿಂದ ಇವುಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳ ರೀತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಉತ್ತಮವಾದ ಸಮವಸ್ತ್ರವನ್ನು ಧರಿಸಲಿ. ಅದಕ್ಕೆ ಸ್ವಲ್ಪ ಹೆಚ್ಚಿನ ಹಣ ಬೇಕಾದರೆ ನೀಡೋಣ. ಸಧ್ಯದಲ್ಲೇ ಅಲ್ಪಸಂಖ್ಯಾತ ಶಾಸಕರು ಹಾಗೂ ಸಚಿವರ ಸಭೆ ಕರೆದು ಚರ್ಚೆ ಮಾಡಲಿದ್ದು, ಅದೇ ರೀತಿ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರ ಜತೆಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಾಗುವುದು. ಅಧಿವೇಶನಕ್ಕೂ ಮುಂಚಿತವಾಗಿಯೇ ನಾನು ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
ಅಭಿವೃದ್ಧಿ ಪರಿಷತ್ ಸಭೆಯ ಮುಖ್ಯಾಂಶಗಳು:
- ಕೇಂದ್ರ ಪುರಸ್ಕೃತ ಯೋಜನೆಗಳಡಿ 2025-26 ನೇ ಸಾಲಿನಲ್ಲಿ ಬಿಡುಗಡೆ ಮಾಡದೆ ಬಾಕಿಯುಳಿಸಿರುವ ರೂ. 1,937 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು.
- ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ, ರಾಜ್ಯದ ಪಾಲನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿದ್ದರೂ, ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
- 2025-26ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿಯಲ್ಲಿ ಒಟ್ಟು ರೂ.10,011 ಕೋಟಿ ಹಂಚಿಕೆಯಾಗಿದ್ದು, ಕೇಂದ್ರದ ಪಾಲು ರೂ. 3,497 ಕೋಟಿ, ರಾಜ್ಯದ ಪಾಲು ರೂ. 6,514 ಕೋಟಿ ಇದೆ. ಕೇಂದ್ರದ ಪಾಲಿನಲ್ಲಿ ಕೇವಲ ರೂ. 1,560 ಕೋಟಿ ಬಿಡುಗಡೆಯಾಗಿದ್ದು, ರೂ. 1,937 ಕೋಟಿ ಬಿಡುಗಡೆಯಾಗಿಲ್ಲ.
- ಬಿಡುಗಡೆಯಾಗಿರುವ ಅನುದಾನದಲ್ಲಿ ರೂ.1541 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯದ ಪಾಲಿನಲ್ಲಿ ರೂ. 5628 ಕೋಟಿ ಬಿಡುಗಡೆ ಮಾಡಲಾಗಿದ್ದು, ರೂ. 5,611 ಕೋಟಿ ವೆಚ್ಚ ಮಾಡಲಾಗಿದೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿಖರ ಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇ ಆಡಳಿತ ಇಲಾಖೆಯಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಫಲಾನುಭವಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
- ವಿವಿಧ ಸಾಮಾನ್ಯ ಯೋಜನೆಗಳಿಗೆ ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಅಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಅನುದಾನವನ್ನು ಫಲಾನುಭವಿಗಳ ವಾಸ್ತವಿಕ ಸಂಖ್ಯೆ ಆಧರಿಸಿ ಮಾಡುವಂತೆ ಮುಖ್ಯಮಂತ್ರಿ ಅವರು ತಿಳಿಸಿದರು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಅನುದಾನ ಹಂಚಿಕೆಯಾಗುವಂತೆ ಖಾತ್ರಿಪಡಿಸಬೇಕು.
- ಪ್ರತಿಯೊಬ್ಬ ಫಲಾನುಭವಿಯ ಛಾಯಾಚಿತ್ರ ಸೇರಿದಂತೆ ಸಂಪೂರ್ಣ ವಿವರ ವೆಬ್ಸೈಟ್ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ದೊರೆಯಬೇಕು.
- ಫಲಾನುಭವಿಗಳ ಫೋಟೋ ಹಾಗೂ ವಿಡಿಯೋ ದಾಖಲಾಗಬೇಕು. ಆ ಮೂಲಕ ಪಾರದರ್ಶಕತೆ ತಂದು ಯಾವುದೇ ಕಾರಣಕ್ಕೂ ಯೋಜನೆಗಳ ದುರುಪಯೋಗವಾದಂತೆ ನೋಡಿಕೊಳ್ಳಬೇಕು.
- ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅಡಿ ನಿಗಧಿಪಡಿಸಲಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ಕಚೇರಿ ವೆಚ್ಚಕ್ಕಾಗಿ ಬಳಕೆಯಾಗಬಾರದು.
- 2025-26ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಅಡಿ ರೂ.28,699 ಕೋಟಿ ಬಿಡುಗಡೆಯಾಗಿದ್ದು, ರೂ.28,630 ಕೋಟಿ ವೆಚ್ಚವಾಗಿದೆ.
- ಟಿ.ಎಸ್.ಪಿ ಅಡಿ ರೂ.10,962 ಕೋಟಿ ಬಿಡುಗಡೆಯಾಗಿದ್ದು, ರೂ. 10,926.94 ಕೋಟಿ ವೆಚ್ಚವಾಗಿದೆ. ಒಟ್ಟಾರೆ ರೂ. ರೂ.39,661.99 ಕೋಟಿ ಬಿಡುಗಡೆಯಾಗಿದ್ದು, ರೂ.39,557.43 ಕೋಟಿ ವೆಚ್ಚ ಅಂದರೆ ಶೇ.99.74 ರಷ್ಟು ಪ್ರಗತಿ ಸಾಧಿಸಲಾಗಿದೆ.
- ಈ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೂ. 7911 ಕೋಟಿ, ಸಮಾಜ ಕಲ್ಯಾಣ ಇಲಾಖೆ ರೂ. 5236 ಕೋಟಿ, ಇಂಧನ ಇಲಾಖೆ ರೂ.5231 ಕೋಟಿ, ಕಂದಾಯ ಇಲಾಖೆ ರೂ. 3954 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರೂ.2403 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರೂ.2275 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ರೂ.1819 ಕೋಟಿ, ಶಾಲಾ ಶಿಕ್ಷಣ ಇಲಾಖೆ ರೂ. 1202 ಕೋಟಿ, ಸಾರಿಗೆ ಇಲಾಖೆ ರೂ.1814 ಕೋಟಿ ವೆಚ್ಚ ಮಾಡಿದೆ.
ಎಲ್ಲಾ ಇಲಾಖೆಗಳಲ್ಲೂ ಎಸ್ ಸಿಪಿ ಟಿಎಸ್ಪಿ ಹಣ ಖರ್ಚಾಗುತ್ತಿದೆ
ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟಿರುವ 44,631 ಕೋಟಿ ಖರ್ಚಾಗುತ್ತಿದೆಯೇ ಎಂದು ಕೇಳಿದಾಗ, “ಎಲ್ಲಾ ಇಲಾಖೆಗಳಲ್ಲೂ ಈ ಹಣ ಖರ್ಚಾಗುತ್ತಿದೆ. ಒಂದು ಇಲಾಖೆಯಲ್ಲಿ 2600 ಕೋಟಿ ಬಾಕಿ ಉಳಿದುಕೊಂಡಿತ್ತು. ಈ ವರ್ಷ ಅದನ್ನು ವರ್ಗಾವಣೆ ಮಾಡಿ ಖರ್ಚು ಮಾಡಲಾಗಿದೆ. ಜನರಿಗಾಗಿ ಅನುಷ್ಠಾನಗೊಳ್ಳುವ ಯೋಜನೆ ರೂಪಿಸಬೇಕು, ಯೋಜನೆಗಳು ಜನರಿಗೆ ತಲುಪಬೇಕು” ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶಿಕ್ಷಕರಿಗೆ ವೇತನ ಸರಿಯಾಗಿ ತಲುಪುತ್ತಿಲ್ಲ ಎಂದು ಕೇಳಿದಾಗ, “ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ ನನ್ನ ಕನಸಿನ ಯೋಜನೆಯಾಗಿದೆ. ಪ್ರಾಥಮಿಕ ಶಿಕ್ಷಣ ಎಲ್ಲಾ ಮಕ್ಕಳ ಶಿಕ್ಷಣಕ್ಕೆ ಅಡಿಪಾಯವಾಗಿದ್ದು, ಈ ವಿಚಾರವಾಗಿ ನಮ್ಮ ಯೋಜನೆಗಳನ್ನು ಮತ್ತೊಂದು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.
ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಆರೋಪ ಮಾಡುವವರು ಮಾಡಲಿ. ನಮ್ಮ ಕಾನೂನು ಏನಿದೆ ಅದರ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡುತ್ತೇವೆ” ಎಂದರು..