ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ (Gruhalakshmi scheme) ಮಹಿಳೆಯರ ಖಾತೆಗೆ ಜಮೆಯಾಗುವ ಮಾಸಿಕ 2,000 ರೂ. ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರ ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸುವಂತೆ ಸಿಎಂ ಸೂಚಿಸಿದ್ದಾರೆ.
ಪ್ರತಿ ತಿಂಗಳು ಸುಮಾರು 1 ಕೋಟಿ 24 ಲಕ್ಷದ 48 ಸಾವಿರ ಕುಟುಂಬಗಳ ಯಜಮಾನಿಯರ ಖಾತೆಗೆ ಜಮೆಯಾಗುತ್ತಿರುವ ಹಣವು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸ್ವಾವಲಂಬನೆಗೆ ಆಸರೆಯಾಗಿದೆ. ಆದರೆ, ವಾಣಿಜ್ಯ ಬ್ಯಾಂಕುಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಜಮೆಯಾದ ತಕ್ಷಣವೇ ಫಲಾನುಭವಿಗಳ ಗಮನಕ್ಕೆ ತರದೆ, ಹಳೆಯ ಸಾಲದ ಬಾಕಿ ಅಥವಾ ಬಡ್ಡಿಯ ನೆಪವೊಡ್ಡಿ ಹಣ ಕಡಿತಗೊಳಿಸುತ್ತಿರುವುದು ಯೋಜನೆಯ ಮೂಲ ಆಶಯಕ್ಕೇ ಧಕ್ಕೆ ತರುತ್ತಿದೆ ಎಂದು ದಿನೇಶ್ ಗೂಳಿಗೌಡ ತಮ್ಮ ಮನವಿಯಲ್ಲಿ ವಿವರಿಸಿದ್ದರು.
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಪರಿಶೀಲನಾ ಸಮಿತಿ (DLRC) ಸಭೆಗಳಲ್ಲೂ ಜಿಲ್ಲಾಡಳಿತಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಗೃಹಲಕ್ಷ್ಮಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಾರದೆಂದು ಈಗಾಗಲೇ ಸ್ಪಷ್ಟಪಡಿಸಿವೆ. ಇದರ ಬೆನ್ನಲ್ಲೇ, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕುಗಳು ಗೃಹಲಕ್ಷ್ಮಿ ಅನುದಾನವನ್ನು ಫಲಾನುಭವಿಯ ಹಳೆಯ ಸಾಲ ಅಥವಾ ಬಡ್ಡಿಗೆ ಜಮೆ ಮಾಡಿಕೊಳ್ಳದಂತೆ ಮತ್ತು ಮಹಿಳೆಯರು ಕುಟುಂಬ ನಿರ್ವಹಣೆಗೆ ಹಣವನ್ನು ಮುಕ್ತವಾಗಿ ಡ್ರಾ ಮಾಡಲು ಅವಕಾಶ ನೀಡುವಂತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಮೂಲಕ ತಕ್ಷಣವೇ ಕಠಿಣ ಸುತ್ತೋಲೆ ಹೊರಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಫಲಾನುಭವಿಗಳ ಖಾತೆಗೆ ಹಣ ಬರುತ್ತಿದ್ದಂತೆ ಸ್ಥಳದಲ್ಲೇ ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಖಾಸಗಿ ಫೈನಾನ್ಸ್ ಕಂಪನಿಗಳು ಹಾಗೂ ಏಜೆಂಟರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ, ಅವರ ಪರವಾನಗಿ ರದ್ದುಪಡಿಸುವಂತಹ ಕಠಿಣ ಎಚ್ಚರಿಕೆ ನೀಡಲು ನಿರ್ಧರಿಸಲಾಗಿದೆ. ಜತೆಗೆ, ಮಹಿಳೆಯರ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಸಾಲದ ಬಾಕಿಗೆ ಕಡಿತಗೊಳಿಸಲಾಗಿರುವ ಹಣವನ್ನು ತಕ್ಷಣವೇ ಆಯಾ ಮಹಿಳೆಯರ ಖಾತೆಗೆ ಮರುಜಮೆ ಮಾಡಿಸಲು ಬ್ಯಾಂಕುಗಳಿಗೆ ತಾಕೀತು ಮಾಡುವಂತೆ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ.