Safari Ban: ಸಫಾರಿಗೆ ಮತ್ತೆ ಅನುಮತಿ; ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲು ಸಿಎಂ ಸೂಚನೆ
Bandipur and Nagarahole safari Ban: ಬಂಡೀಪುರ ಮತ್ತು ನಾಗರಹೊಳೆಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿ ನಿರ್ಬಂಧಿಸಿರುವ ಕಾರಣಕ್ಕೆ ಅದರ ಮೇಲೆ ಅವಲಂಬಿತರಾಗಿರುವ ಹಲವು ಜನ ಉದ್ಯೋಗದಿಂದ ವಂಚಿತರಾಗಿರುವುದಾಗಿ ಅರಣ್ಯ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಸಫಾರಿ ನಿಷೇಧ ನಿರ್ಣಯವನ್ನು ಪುನರ್ ಪರಿಶೀಲಿಸಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಹುಲಿ ಸಫಾರಿ (ಸಾಂದರ್ಭಿಕ ಚಿತ್ರ) -
ಬೆಂಗಳೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ಸಫಾರಿಗೆ ಮತ್ತೆ ಅನುಮತಿ ನೀಡುವ ಕುರಿತು ಪರಿಶೀಲಿಸಲು ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಮಾನವ- ವನ್ಯಜೀವಿ ಸಂಘರ್ಷದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯದ ಪ್ರಾಣಿಗಳಿಗೆ ಸಫಾರಿಯಿಂದ ತೊಂದರೆಗಳಾಗುತ್ತಿದ್ದು, ಕಾಡಿನಿಂದ ಹೊರಗೆ ಬರುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ಕಾರಣದಿಂದ ಅರಣ್ಯ ಇಲಾಖೆಯಿಂದ ಸಫಾರಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಸಫಾರಿಯನ್ನು ಪುನಃ ಪ್ರಾರಂಭಿಸಲು ಒತ್ತಾಯ ಬರುತ್ತಿರುವುದಾಗಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು, ವಿಧಾನಸೌಧದಲ್ಲಿ ನಡೆದ ರಾಜ್ಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಸಿಎಂ ಸಿದ್ದಾರಾಮಯ್ಯ ಅವರ ಗಮನಕ್ಕೆ ತಂದರು.
ಸಫಾರಿ ನಿರ್ಬಂಧಿಸಿರುವ ಕಾರಣಕ್ಕೆ ಅದರ ಮೇಲೆ ಅವಲಂಬಿತರಾಗಿರುವ ಸ್ಥಳೀಯರೂ ಉದ್ಯೋಗದಿಂದ ವಂಚಿತರಾಗಿರುವುದಾಗಿ ಸಚಿವರು ತಿಳಿಸಿದರು. ಇದನ್ನು ಆಲಿಸಿದ ಮುಖ್ಯಮಂತ್ರಿಗಳು ಸಫಾರಿಗೆ ಮತ್ತೆ ಅನುಮತಿ ನೀಡುವ ಹಾಗೂ ಅರಣ್ಯ ಪ್ರವಾಸೋದ್ಯಮದಿಂದ ಮತ್ತೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಪುನರ್ ಪರಿಶೀಲಿಸಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು ಸೂಚಿಸಿದರು.
ಬಳ್ಳಾರಿ ಗುಂಪು ಘರ್ಷಣೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ: ಸಿಎಂ ಸಿದ್ದರಾಮಯ್ಯ
ಸಭೆಯಲ್ಲಿ ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ.ರೇ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನವೆಂಬರ್ 7ರಿಂದ ಬಂದ್ ಆಗಿರುವ ಸಫಾರಿ
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂವರು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಸಫಾರಿ ಬಂದ್ ಮಾಡಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆದೇಶ ಹೊರಡಿಸಿದ್ದರು.
ನವೆಂಬರ್ 7ರಿಂದ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲು ಮತ್ತು ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರೆಕ್ಕಿಂಗ್ (ಚಾರಣ) ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು. ಸಫಾರಿಗೆ ನಿಯೋಜಿಸಿದ್ದ ಅಧಿಕಾರಿಗಳು ಮತ್ತು ವಾಹನ ಚಾಲಕರ ಸಹಿತ ಎಲ್ಲ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿತ್ತು.