ಬೆಂಗಳೂರು: ಮಧುಗಿರಿ ಮತ್ತು ಇಂಡಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಕೆ.ಕೆ.ಆರ್.ಡಿ.ಬಿ ಮ್ಯಾಕ್ರೋ ಅನುದಾನದಡಿ ನೂತನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳನ್ನು (ಜಿಟಿಟಿಸಿ-GTTCs in Karnataka) ಸ್ಥಾಪಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಂಗಳವಾರ ಸಭೆ ನಡೆಯಿತು.
ನೂತನ ಜಿಟಿಟಿಸಿ ಕೇಂದ್ರಗಳ ಸ್ಥಾಪನೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಜಿಟಿಟಿಸಿ ಮೂಲಕ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಟ್ಟು 32 ಜಿಟಿಟಿಸಿ ಕೇಂದ್ರಗಳಿವೆ. ಈ ಸಾಲಿನ ಬಜೆಟ್‌ನಲ್ಲಿ ಹೊಸ 7 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಕೇಂದ್ರಗಳ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಿಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಇಂಡಿ, ಮಧುಗಿರಿ, ಕಂಪ್ಲಿ, ರಾಯಚೂರು ಗ್ರಾಮೀಣ, ಸಿಂಧನೂರಿನಲ್ಲಿ ಜಿಟಿಟಿಸಿ ಪ್ರಾರಂಭಿಸಲು ಸ್ಥಳ ಗುರುತಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಸಂಡೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಪ್ರಕ್ರಿಯೆ ಆದಷ್ಟು ಬೇಗನೆ ಪ್ರಾರಂಭಿಸಲು ಸೂಚನೆ ನೀಡಿದರು.
ಜಿಟಿಟಿಸಿ ಪ್ರವೇಶಾತಿಯನ್ನು 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಲ್ಲಿಂದ ತರಬೇತಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ವಿದೇಶಿ ಕಂಪನಿಗಳಲ್ಲಿಯೂ ಸೇರಿದಂತೆ ಶೇಕಡ 100 ರಷ್ಟು ನೇಮಕಾತಿ ಆಗುತ್ತಿದೆ ಎಂದ ಸಿಎಂ, ಯಾವ ಕೋರ್ಸ್‌ಗಳಿಗೆ ಬೇಡಿಕೆ ಇದೆ ಅಂತಹ ಕೋರ್ಸ್‌ಗಳನ್ನು ಪ್ರಾರಂಭಿಸಲು ಸೂಚನೆ ನೀಡಿದರು. ಅಲ್ಲದೆ ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲು ತಿಳಿಸಿದರು.
ಜಿಟಿಟಿಸಿ ಉತ್ಪಾದನಾ ಕೇಂದ್ರದಲ್ಲಿ ಇಸ್ರೋದ ಚಂದ್ರಯಾನ ನೌಕೆ ಲೂನಾರ್ ರೋವರ್ ಚಕ್ರದ ಉತ್ಪಾದನೆ ಸೇರಿದಂತೆ ಹಲವು ವೈಮಾನಿಕ ಉಪಕರಣಗಳ ಉತ್ಪಾದನೆ ಮಾಡಲಾಗುತ್ತಿದೆ. ಜಿಟಿಟಿಸಿ ಅಧಿಕಾರಿಗಳು, ಕಾರ್ಮಿಕ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂಪರ್ವೇಜ್ ಸೇರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.