ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget 2026: ನಾಳೆ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ; ಏನೆಲ್ಲಾ ನಿರೀಕ್ಷೆಗಳಿವೆ?

ರಾಜ್ಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಜತೆಗೆ, ದೀರ್ಘ ಕಾಲದ ಜನಪರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ, ಸಹಕಾರ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಜೆಟ್‌ ಬಗ್ಗೆ ಭಾರೀ ನಿರೀಕ್ಷೆಗಳಿವೆ.

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಸಿಎಂ ಹಾಗೂ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ (CM Siddaramaiah) ಅವರು ದಾಖಲೆಯ 17ನೇ ಬಜೆಟ್ (Karnataka Budget 2026) ಅನ್ನು ಶುಕ್ರವಾರ ಮಂಡಿಸಲಿದ್ದಾರೆ. 2026-27ನೇ ಸಾಲಿನ ರಾಜ್ಯ ಬಜೆಟ್ ಗಾತ್ರ, ಕಳೆದ ಬಾರಿಯ ಆಯವ್ಯಯಕ್ಕಿಂತ ಹೆಚ್ಚಾಗಲಿದ್ದು, ಸುಮಾರು 4.50 ಲಕ್ಷ ಕೋಟಿ ಆಸುಪಾಸಿನಲ್ಲಿ ನಾಳಿನ ಬಜೆಟ್ ಗಾತ್ರ ಇರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಬಜೆಟ್‌ ಬಗ್ಗೆ ರಾಜ್ಯದ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ರಾಜ್ಯದ ಆದಾಯದಲ್ಲಿ ಭಾರಿ ಮೊತ್ತ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳಿಗೆ ಬರಪೂರ ಅನುದಾನ ನೀಡುವ ನಿರೀಕ್ಷೆ ಇದ್ದು, ಸಂಪನ್ಮೂಲ ಸಂಗ್ರಹಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಶೇ. 1ರಷ್ಟು ಸೆಸ್ ಜಾರಿ ಮಾಡುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡುವ ಸಾಧ್ಯತೆ ಇದೆ.

ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಜತೆಗೆ, ದೀರ್ಘ ಕಾಲದ ಜನಪರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ, ಸಹಕಾರ, ಕೈಗಾರಿಕೆ, ಸಾರಿಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಹಿಂದುಳಿದ ವರ್ಗಗಳ ಮೀಸಲಾತಿ ಅನುದಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಭಾರೀ ನಿರೀಕ್ಷೆಗಳಿವೆ.



ರಾಜ್ಯ ಬಜೆಟ್‌ ನಿರೀಕ್ಷೆಗಳು

ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ

ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಈ ಬಾರಿ ಬಜೆಟ್ ಗಾತ್ರವನ್ನು ಗಣನೀಯವಾಗಿ ಹೆಚ್ಚಿಸುವ ಸಾಧ್ಯತೆಯಿದೆ. ಕಳೆದ ವರ್ಷ ಬಂಡವಾಳ ವೆಚ್ಚಕ್ಕಾಗಿ 55,877 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಈ ಬಾರಿ ಅದು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ನೀರಾವರಿ ಮತ್ತು ಕೃಷಿಗೆ ಆದ್ಯತೆ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರಗತಿಯಲ್ಲಿರುವ ಬೃಹತ್ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಅನುದಾನ ಘೋಷಿಸುವ ಸಾಧ್ಯತೆಯಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗಳನ್ನು ನಿರೀಕ್ಷಿಸಲಾಗಿದೆ.

ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ಯೋಜನೆಗಳ ವಿಸ್ತರಣೆ ಮತ್ತು ಡಬಲ್ ಡೆಕ್ಕರ್ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ 5 ನಗರ ಪಾಲಿಕೆಗಳಿಂದ ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ಶೌಚಾಲಯ ಸೇರಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಅನುದಾನದ ಬೇಡಿಕೆ ಬಂದಿದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ

ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳ ಘೋಷಣೆ, 'ಕರ್ನಾಟಕ ಪಬ್ಲಿಕ್ ಶಾಲೆ'ಗಳ ಸಂಖ್ಯೆ ಹೆಚ್ಚಳ ಮತ್ತು ಬಲವರ್ಧನೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿಶೇಷ ತರಬೇತಿ ಯೋಜನೆ. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಘೋಷಣೆ ನಿರೀಕ್ಷೆ ಇದೆ.

ಕೈಗಾರಿಕೆ ಮತ್ತು ಇಂಧನ ವಲಯ

ವಿದ್ಯುತ್ ಮೇಲಿನ ತೆರಿಗೆಯನ್ನು ಇಳಿಸುವ ಮೂಲಕ ಜನಸಾಮಾನ್ಯರಿಗೆ ಮತ್ತು ಕೈಗಾರಿಕೆಗಳಿಗೆ ನೆರವಾಗುವ ಸಾಧ್ಯತೆ ಇದ್ದು, 100% ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೆಗಳಿಗೆ ವಿಶೇಷ ಸಬ್ಸಿಡಿ ನೀಡುವ ನಿರೀಕ್ಷೆ. ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ, KIADB ಮತ್ತು KSSIDC ಕೈಗಾರಿಕಾ ಪ್ರದೇಶಗಳ ಆಧುನೀಕರಣ ನಿರೀಕ್ಷೆ.

ಪ್ರವಾಸೋದ್ಯಮಕ್ಕೆ ಉತ್ತೇಜನ

ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ (PPP) ಮಾದರಿಯಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗುವ ಸಾಧ್ಯತೆಯಿದೆ.

Petrol Price hike: ಗಲ್ಫ್‌ ಯುದ್ಧದ ನಡುವೆ ರಾಜ್ಯ ಬಜೆಟ್‌ನಲ್ಲೂ ಪೆಟ್ರೋಲ್‌ ಬೆಲೆ ಏರಿಕೆ ಚಿಂತನೆ!

ಸಾರಿಗೆ ವಲಯ

ಬಸ್, ಟ್ಯಾಕ್ಸಿ, ಆಟೋ ಚಾಲಕರು, ಮಾಲೀಕರು ಸೇರಿ ಸರ್ಕಾರಿ ಹಾಗೂ ಖಾಸಗಿ ಸಾರಿಗೆ ವಲಯದ ನೌಕರರು ಈ ಬಾರಿಯ ಬಜೆಟ್‌ನಲ್ಲಿ ತಮಗೂ ಒಂದಷ್ಟು ಲಾಭವಾಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಅಸಂಘಟಿತ ವಲಯದ ಚಾಲಕ, ಮಾಲೀಕರು ಆಟೊ, ಟ್ಯಾಕ್ಸಿ, ಖಾಸಗಿ ಬಸ್, ಲಾರಿ ಚಾಲಕರ ವರ್ಗಕ್ಕೆ ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ಬಜೆಟ್‌ನಲ್ಲಿ ಸಿಗಬಹುದೆಂಬ ಆಶಯದಲ್ಲಿದ್ದಾರೆ.