ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GST cut: ತಾವೇ ಹೆಚ್ಚಿಸಿದ್ದ ಜಿಎಸ್‌ಟಿ ಕಡಿತಗೊಳಿಸಿ ಕೇಂದ್ರ ಬೆನ್ನು ತಟ್ಟಿಕೊಳ್ಳುತ್ತಿದೆ: ಸಿಎಂ ವ್ಯಂಗ್ಯ

CM Siddaramaiah: 2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್‌ಟಿಯನ್ನು ಜಾರಿಗೆ ತಂದು ಜಿಎಸ್‌ಟಿ ದರ ನಿಗದಿಪಡಿಸಿದರು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರ ಸರ್ಕಾರ, ಆ ಹಣವನ್ನು ಮರಳಿ ನೀಡುವರೇ? ಎಂದು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ ಅವರು, ತಾವೇ ಹೆಚ್ಚಿಸಿದ ಜಿಎಸ್‌ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೈಸೂರು, ಅಕ್ಟೋಬರ್ 3: ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಜಿಎಸ್‌ಟಿಯನ್ನು ಸರಳೀಕರಣಗೊಳಿಸಿರುವ (GST cut) ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು. ಜಿಎಸ್‌ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್‌ಟಿಯನ್ನು ಜಾರಿಗೆ ತಂದು ಜಿಎಸ್‌ಟಿ ದರ ನಿಗದಿಪಡಿಸಿದರು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರ ಸರ್ಕಾರ, ಆ ಹಣವನ್ನು ಮರಳಿ ನೀಡುವರೇ? ತಾವೇ ಹೆಚ್ಚಿಸಿದ ಜಿಎಸ್ ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ, ಜಿಎಸ್‌ಟಿಯನ್ನು ಸರಳೀಕರಣಗೊಳಿಸಿ, ಕಡಿತಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ರಾಜ್ಯಕ್ಕೆ ಕೇಂದ್ರದ ಸುಮಾರು 17,000 ಕೋಟಿ ಅನುದಾನದಲ್ಲಿ ಖೋತಾ

ಕೇಂದ್ರದಿಂದ ತೆರಿಗೆ ಹಣವಾಗಿ ಕೇವಲ 3200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಉತ್ತರಪ್ರದೇಶಕ್ಕೆ ಶೇ.18 ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ. 3.5 ರಷ್ಟು ನೀಡುತ್ತಿರುವುದು ಅನ್ಯಾಯ. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ , ನಮಗೆ ರೂಪಾಯಿಗೆ ಕೇವಲ 14 ಪೈಸೆ ಮಾತ್ರ ರಾಜ್ಯ ದೊರೆಯುತ್ತದೆ. 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರ ವಿತ್ತಸಚಿವರು ರದ್ದುಪಡಿಸಿದರು. ಆಯೋಗದ ಶಿಫಾರಸ್ಸಿನಂತೆ 5,490 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿ 3000 ಕೋಟಿ, ರಸ್ತೆ ನಿರ್ಮಾಣಕ್ಕೆ 3000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೊಟಿ ರೂ.ಗಳ ಅನುದಾನವನ್ನು ನಮಗೆ ನೀಡಲಾಗಿಲ್ಲ. ಒಟ್ಟಾರೆ 17000 ಕೋಟಿ ರೂ. ಬರಬೇಕಾಗಿದ್ದ ಅನುದಾನ ಖೋತಾ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವು ಪಡೆದು ಕೇಂದ್ರದ ಅನುದಾನ ಪಡೆಯಲಾಗುವುದು ಎಂದರು.

ಬಿಜೆಪಿ ಸಂಸದರಿಗೆ ರಾಜ್ಯದ ಹಿತ ಬೇಕಾಗಿಲ್ಲ

ಕೇಂದ್ರದ ಕಡಿಮೆ ಅನುದಾನದ ನಡುವೆ ಗ್ಯಾರಂಟಿಗಳ ವೆಚ್ಚವನ್ನು ಭರಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಸವಾಲನ್ನು ದಿಟ್ಟತನದಿಂದ ಎದುರಿಸಲಾಗುವುದು. ಜಿಎಸ್‌ಟಿ ಸರಳೀಕರಣದಿಂದ ರಾಜ್ಯಸರ್ಕಾರಗಳು ಹೆಚ್ಚು ನಷ್ಟ ಎದುರಿಸಲಿವೆ. ಕರ್ನಾಟಕಕ್ಕೆ ಇದರಿಂದ ವಾರ್ಷಿಕ ಅಂದಾಜು 15 ಸಾವಿರ ಕೋಟಿ ನಷ್ಟವಾಗಲಿದೆ. ಕೇಂದ್ರ ಸರ್ಕಾರ, ಎನ್‌ಡಿಎಗೆ ಬರುವ ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ಜಿಎಸ್‌ಟಿ ಪರಿಹಾರವನ್ನು ನೀಡುತ್ತಿದೆ. ಕರ್ನಾಟಕದ ಬಿಜೆಪಿ ಸಂಸದರಿಗೆ ಮೋದಿಯವರನ್ನು ಹೊಗಳುವುದೇ ಕೆಲಸವಾಗಿದ್ದು, ರಾಜ್ಯದ ಹಿತಚಿಂತನೆ ಮಾಡುತ್ತಿಲ್ಲ ಎಂದರು.

ಅ.7 ರೊಳಗೆ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆಯಿದೆ

ರಾಜ್ಯದಲ್ಲಿ ಜಾತಿ ಸಮೀಕ್ಷೆ ಕಾರ್ಯದ ಪ್ರಗತಿ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಮೀಕ್ಷೆಯಲ್ಲಿ ಜಾತಿವಿವರ- ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ

ಮತಾಂತರ ಹಾಗೂ ಜಾತಿ ಒಡೆಯುವ ದೃಷ್ಟಿಯಿಂದ ಸಮೀಕ್ಷೆಯನ್ನು ಸರ್ಕಾರ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವರಾಗಿದ್ದು, ಕೇಂದ್ರ ನಡೆಸಲಿರುವ ಜಾತಿ ಸಮೀಕ್ಷೆಯ ಉದ್ದೇಶವನ್ನು ತಿಳಿಸಬೇಕು. ಕೇಂದ್ರ ಸರ್ಕಾರಕ್ಕೆ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವಿದೆ. ಕಾಂತರಾಜು ವರದಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಎಂಬಿತ್ಯಾದಿ ಜಾತಿಗಳನ್ನು ನಮೂದಿಸಲಾಗಿತ್ತು. ಜನರು ತಮ್ಮ ಜಾತಿಯನ್ನು ಸ್ವಯಂಪ್ರೇರಿತರಾಗಿ ನಮೂದಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರವಾಗುವುದಿಲ್ಲ. ಆದರೆ ಆಯೋಗ, ಈ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಆದ್ದರಿಂದ ಜನರು ಸ್ವಯಂಪ್ರೇರಿತವಾಗಿ ಹೇಳುವ ಜಾತಿಯ ಮಾಹಿತಿಯನ್ನು ಆಯೋಗ ಪಡೆಯಲಿದೆ. ಇದರಲ್ಲಿ ಜಾತಿ ಒಡೆಯುವ ಪ್ರಶ್ನೆಯಿಲ್ಲ. ಜನರನ್ನು ರಾಜಕೀಯ ಉದ್ದೇಶದಿಂದ ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | CM Siddaramaiah: ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಸಿಎಂ ಸಿದ್ದರಾಮಯ್ಯ

ರಾಜಕಾರಣಕ್ಕಾಗಿ ಆರೋಪ

ವಿಪಕ್ಷ ನಾಯಕ ಅಶೋಕ್ ಅವರು ರೈತರ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಇದ್ದರೂ ಸತ್ತಂತೆಯೇ ಎಂದು ಹೇಳಿಕೆ ನೀಡಿರುವ ಬಗ್ಗೆ ಉತ್ತರಿಸಿ, ಅಶೋಕ್ ಅವರು ವಿಪಕ್ಷದ ನಾಯಕರಾಗಿದ್ದರೂ, ಆರ್‌ಎಸ್‌ಎಸ್‌ನವರ ನಿರ್ದೇಶನದಂತೆ ಮಾತನಾಡುತ್ತಾರೆ. ಅಶೋಕ್‌ರವರು ರಾಜಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ ಎಂದರು.