ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಿಜೆಪಿ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ನಟ ಪ್ರಕಾಶ್ ರಾಜ್, ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಸೇರಿ ನೂರಾರು ಮಂದಿ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಯುವಕರು, ಯುವತಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರವು ಭ್ರಷ್ಟಾಚಾರ ಮತ್ತು ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಇಷ್ಟೊಂದು ದೊಡ್ಡ ಮಟ್ಟದ ಪರೀಕ್ಷಾ ಹಗರಣ ನಡೆದಿದ್ದರೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯುತ್ತಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ವಿಫಲರಾಗಿರುವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಜೆಪಿ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಬೆಂಬಲ
ಪ್ರತಿಭಟನೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಭಾಗವಹಿಸುವ ಮೂಲಕ ಸಿಜೆಪಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಅವರು, ಇದು ಕೇವಲ ಒಂದು ಪರೀಕ್ಷೆಯ ಅಕ್ರಮವಲ್ಲ, ದೇಶದ ಯುವ ಪೀಳಿಗೆಯ ಭವಿಷ್ಯಕ್ಕೆ ಮಾಡುತ್ತಿರುವ ದ್ರೋಹ. ಇಂತಹ ಅನ್ಯಾಯಗಳ ವಿರುದ್ಧ ಪ್ರತಿಯೊಬ್ಬ ನಾಗರಿಕನೂ ಧ್ವನಿ ಎತ್ತಬೇಕಿದೆ ಎಂದು ಕರೆ ನೀಡಿದರು.
ಮಳೆ ಲೆಕ್ಕಿಸದೇ ಪ್ರತಿಭಟನೆ
ಸಿಜೆಪಿ ಪ್ರತಿಭಟನೆ ವೇಳೆ ಭಾನುವಾರ ಸಂಜೆ ಭಾರಿ ಮಳೆ ಸುರಿಯಿತು. ಆದರೂ ಪ್ರತಿಭಟನಾಕಾರರು ಮಳೆ ಲೆಕ್ಕಿಸದೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಾ ಪ್ರತಿಭಟನೆ ನಡೆಸಿದ್ದು ಕಂಡುಬಂತು.