ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆ; 8-10 ದಿನದಲ್ಲಿ ಗ್ಯಾಸ್‌ ಸಮಸ್ಯೆ ಇತ್ಯರ್ಥವಾಗಲಿದೆ ಎಂದ ಸಚಿವ ಕೆ.ಎಚ್‌.ಮುನಿಯಪ್ಪ

LPG Cylinder Shortage: ಪ್ರಸ್ತುತ ಶಾಲೆಗಳು, ಹಾಸ್ಟೆಲ್, ಆಸ್ಪತ್ರೆ, ಇಂದಿರಾ ಕ್ಯಾಂಟೀನ್‌ ಸೇರಿ ಅಗತ್ಯವಿರುವ ಕಡೆ ಸಿಲಿಂಡರ್‌ ಪೂರೈಸಲು ಗಮನ ಹರಿಸುತ್ತಿದ್ದೇವೆ. ಆದರೆ, ಹೋಟೆಲ್ ಉದ್ಯಮಿಗಳು ಮುಂದಿನ ಎಂಟತ್ತು ದಿನ ತಾಳ್ಮೆಯಿಂದ ಕಾಯಬೇಕು ಎಂದು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಸಚಿವ ಕೆ.ಎಚ್‌.ಮುನಿಯಪ್ಪ.

ಬೆಂಗಳೂರು: ಬೆಂಗಳೂರು, ಮಂಗಳೂರು ಸೇರಿ ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲ ಸಮಸ್ಯೆ ( LPG Cylinder Shortage) ಮುಂದಿನ 8 ರಿಂದ 10 ದಿನಗಳಲ್ಲಿ ಇತ್ಯರ್ಥವಾಗಲಿದೆ. ಹೋಟೆಲ್ ಉದ್ಯಮದವರು ತಾಳ್ಮೆ ಕಾಯ್ದುಕೊಳ್ಳಬೇಕು. ಕಾಳಸಂತೆಯಲ್ಲಿ ಸಿಲಿಂಡ‌ರ್ ಮಾರಾಟವಾದರೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ (K.H. Muniyappa) ತಿಳಿಸಿದರು.

ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ್ ಮತ್ತು ಎಂ.ನಾಗರಾಜು ಅವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಎಲ್‌ಪಿಜಿ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಬೆಳಗ್ಗೆ ಇಲಾಖೆ ಕಾರ್ಯದರ್ಶಿ, ಅಧಿಕಾರಿಗಳು ಹಾಗೂ ನಾವು ಆಯಿಲ್ ಕಂಪನಿಗಳ ಜತೆಗೆ ಸಭೆ ಮಾಡಿದ್ದೇವೆ. ಅವರು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಒಪ್ಪಿದ್ದಾರೆ. ಸಮಸ್ಯೆಗೆ ಶೀಘ್ರವೇ ಮುಕ್ತಿ ದೊರೆಯಲಿದೆ ಎಂದು ಭರವಸೆ ನೀಡಿದರು.

ರಾಜ್ಯದ ಆಸ್ಪತ್ರೆಗಳಲ್ಲಿ ಊಟ ತಯಾರಿಕೆ ಮೇಲೂ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಅತ್ಯಗತ್ಯ ಪದಾರ್ಥ ತಯಾರಿಕೆಗೆ ಆಗುವಷ್ಟು ಅನಿಲ ಪೂರೈಕೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಆಸ್ಪತ್ರೆಗಳ ಪೂರೈಕೆ ನಿಲ್ಲಿಸುವಂತಿಲ್ಲ. ವಾಣಿಜ್ಯ ಸಿಲಿಂಡರ್‌ಗಳು ಅಗತ್ಯದಷ್ಟು ದಾಸ್ತಾನು ಇಲ್ಲ. ಆದರೂ ಆಸ್ಪತ್ರೆಗಳಿಗೆ ಒದಗಿಸಲು ಪೂರೈಕೆದಾರರು ಒಪ್ಪಿದ್ದಾರೆ. ಆದರೆ ಹೋಟೆಲ್ ಉದ್ಯಮಿಗಳು ಮುಂದಿನ ಎಂಟತ್ತು ದಿನ ತಾಳ್ಮೆಯಿಂದ ಕಾಯಬೇಕು. ಹೋಟೆಲ್‌ಗಳಲ್ಲಿ ವಿದ್ಯುತ್ ಒಲೆಯೊಂದಿಗೆ ಅಗತ್ಯ ಆಹಾರ ಪದಾರ್ಥ ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.

ಪ್ರಸ್ತುತ ಶಾಲೆಗಳು, ಹಾಸ್ಟೆಲ್, ಆಸ್ಪತ್ರೆ, ಇಂದಿರಾ ಕ್ಯಾಂಟೀನ್‌ ಸೇರಿ ಅಗತ್ಯವಿರುವ ಕಡೆ ಸಿಲಿಂಡರ್‌ ಪೂರೈಸಲು ಗಮನ ಹರಿಸುತ್ತೇವೆ. ಭಾರತಕ್ಕೆ ಎರಡು ಹಡಗುಗಳು ತೈಲ ಸಮೇತ ಆಗಮಿಸಿವೆ. ಮುಂದೆ ಸುಮಾರು ಹತ್ತರಿಂದ ಹನ್ನೆರಡು ಹಡಗುಗಳು ಬರಲಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಂಡು ಹೆಚ್ಚಿನ ಮಾಹಿತಿ ನೀಡುತ್ತೇನೆ. ಹಾಲಿ ಬಂದ ಹಡುಗಳಿಂದ ತೈಲ ಸಂಸ್ಕರಿಸಿ ರಾಜ್ಯದಲ್ಲಿ ಪೂರೈಕೆಗೆ ಬೇಕಾದ ಏರ್ಪಾಡು ಮಾಡಿಕೊಳ್ಳುವಂತೆ ಅಧಿಕಾರಿಗಳು, ಕಂಪನಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ವಾಣಿಜ್ಯ ಸಿಲಿಂಡ‌ರ್ ಹೆಚ್ಚಿನ ಬೆಲೆಗೆ ಮಾರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಗ್ರಾಹಕರಿಗೆ ಸಿಗಬೇಕಾದ ಸಿಲಿಂಡರ್ ಕಾಳಸಂತೆಗೆ ಹೋಗದಂತೆ ತಡೆಯುವಂತೆ ತಿಳಿಸಿದ್ದೇವೆ.

LPG Cylinder Theft: ಎಲ್‌ಪಿಜಿ ಕೊರತೆ ನಡುವೆ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; ಬೆಂಗಳೂರು ಸೇರಿ 2 ಕಡೆ ಸಿಲಿಂಡರ್ ಕಳವು, ವಿಡಿಯೊ ವೈರಲ್‌!

ಇನ್ನೊಂದು ವಾರದಲ್ಲಿ ವಾಣಿಜ್ಯ ಸಿಲಿಂಡ‌ರ್ ಸಿಗುವ ಭರವಸೆ ಇದೆ. ಇನ್ನು ಬೆಂಗಳೂರು, ಮಂಗಳೂರು ನಗರದಲ್ಲಿ ಎಲ್‌ಪಿಜಿ, ಸಿಎನ್‌ಜಿ ಆಟೋಗಳು ಅನಿಲ ಪೂರೈಕೆ ಸಮಸ್ಯೆ ಎದುರಿಸುತ್ತಿವೆ. ಇದರ ನಿವಾರಣೆಗೆ ಸೂಚಿಸಿದ್ದೇನೆ. ಈ ಅನಿಲ ಪೂರೈಕೆ ವಲಯವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ತೆರಿಗೆ ಎಲ್ಲವು ಸರ್ಕಾರ ನೋಡಿಕೊಳ್ಳುತ್ತದೆ. ಆದರೆ ಅಡುಗೆ ಅನಿಲ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ತೆರಿಗೆ ಹಾಕಿದ್ದರೆ ಬಗ್ಗೆ ಮಾಹಿತಿ ಇಲ್ಲ ತಿಳಿದುಕೊಂಡು ಆ ಬಗ್ಗೆ ಮಾತನಾಡುವೆ ಎಂದು ಅವರು ಕಲಾಪದಲ್ಲಿ ಉತ್ತರಿಸಿದರು.