ಬೆಂಗಳೂರು: ನಗರದಲ್ಲಿ ‘ಝಾಂಬಿ ಡ್ರಗ್’ (Zombie Drug) ಹಾವಳಿ ಶುರುವಾಗಿದೆ ಎಂದು ವೈರಲ್ ಆಗಿದ್ದ ವಿಡಿಯೊ ಸಂಪೂರ್ಣ ಆಧಾರರಹಿತವಾಗಿದ್ದು, ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಯುವಕನ ವಿಡಿಯೊವೊಂದು ‘ಝಾಂಬಿ ಡ್ರಗ್’ ಪ್ರಭಾವ ಎಂದು ಬಿಂಬಿತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಕ್ತರು, ವಿಡಿಯೊದಲ್ಲಿದ್ದ ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆತ ಯಾವುದೇ ಮಾದಕ ದ್ರವ್ಯ ಸೇವಿಸಿಲ್ಲ ಎಂಬುದು ದೃಢಪಟ್ಟಿದೆ. ಆತನಿಗೆ ಆರ್ಥ್ರೈಟಿಸ್ ಇದ್ದು, ಆಲ್ಕೋಹಾಲ್ ಜತೆಗೆ ಪೇನ್‌ಕಿಲ್ಲರ್ ಮಾತ್ರೆ ಸೇವಿಸಿದ್ದರಿಂದ ನಶೆಯಿಂದ ಸಮತೋಲನ ತಪ್ಪಿದ್ದಾನೆ. ಆದರೆ, ಕೇವಲ ಊಹೆಗಳ ಮೇಲೆ ಒಬ್ಬ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡುವುದು ಅಪರಾಧ ಎಂದು ತಿಳಿಸಿದ್ದಾರೆ.
ವಿಡಿಯೊ ಅಪ್‌ಲೋಡ್ ಮಾಡಿದವನ ಬಂಧನ
ಸುಳ್ಳು ಮಾಹಿತಿಯೊಂದಿಗೆ ಮೊದಲು ವಿಡಿಯೊ ಹಂಚಿಕೊಂಡಿದ್ದ ವ್ಯಕ್ತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿ ವಿಡಿಯೊ ಬಿಡುಗಡೆ ಮಾಡಿದ್ದಾನೆ.
ಗಣ್ಯರಿಗೂ ಸಂಕಷ್ಟ?
ಈ ವಿಡಿಯೊವನ್ನು ನಟ ದುನಿಯಾ ವಿಜಯ್, ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಹಂಚಿಕೊಂಡಿದ್ದರು. ಆಧಾರರಹಿತ ಮಾಹಿತಿ ಹಂಚಿಕೊಂಡ ಸುಮಾರು 25 ಮಂದಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿರುವುದಾಗಿ ಕಮಿಷನರ್ ತಿಳಿಸಿದ್ದಾರೆ.
ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆ ತಿಳಿಯಿರಿ. ಮೆಡಿಕಲ್ ರಿಪೋರ್ಟ್ ಇಲ್ಲದೆ ಡ್ರಗ್ಸ್ ಸೇವನೆಯಂತಹ ಗಂಭೀರ ಆರೋಪಗಳನ್ನು ಮಾಡಬಾರದು. ವಿದೇಶಗಳಲ್ಲಿ ಇಂತಹ ಡ್ರಗ್ಸ್ ಇದೆ ಎಂಬ ಕಾರಣಕ್ಕೆ ಇಲ್ಲಿಯೂ ಇದೆ ಎಂದು ಊಹಿಸಿ ಪೋಸ್ಟ್ ಹಾಕುವವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ತಪ್ಪು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ
ಝಾಂಬಿ ಡ್ರಗ್ ಹಾವಳಿ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಪ್ರಕಟಣೆ ನೀಡಲಾಗಿದ್ದು, ವಿಡಿಯೊದಲ್ಲಿದ್ದ ವ್ಯಕ್ತಿ ಯಾವುದೇ ಮಾದಕವಸ್ತು ಸೇವಿಸಿಲ್ಲ. ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪರಿಶೀಲಿಸದ ಅಥವಾ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ತಿಳಿಸಲಾಗಿದೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಬ್ಬ ವ್ಯಕ್ತಿ "ಝಾಂಬಿ ಡ್ರಗ್" (ಕ್ಸೈಲಜಿನ್ ಮಿಶ್ರಿತ ಮಾದಕ ಪದಾರ್ಥ) ಪ್ರಭಾವದಲ್ಲಿರುವಂತೆ ಕಾಣಿಸಿಕೊಂಡಿದ್ದಾನೆಂಬ ವಿಡಿಯೋವೊಂದು ಹರಿದಾಡುತ್ತಿರುವ ಬಗ್ಗೆ ಮಾಹಿತಿಯು ಬೆಂಗಳೂರು ನಗರ ಪೊಲೀಸರ ಗಮನಕ್ಕೆ ಬಂದಿತ್ತು. ಈ ಸಂಬಂಧ, ಬಾಗಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆ ಸಮೀಪದಲ್ಲಿ ಆ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಕೊಂಡು ತಕ್ಷಣವೇ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ವೈದ್ಯಕೀಯ ವರದಿಗಳ ಪ್ರಕಾರ, ಆ ವ್ಯಕ್ತಿಯು ಯಾವುದೇ ಮಾದಕವಸ್ತು ಅಥವಾ ಮನೋಪ್ರೇರಕ ಪದಾರ್ಥಗಳನ್ನು ಸೇವಿಸಿರುವುದಿಲ್ಲ ಎಂದು ದೃಢಪಟ್ಟಿದೆ. ವಿಚಾರಣೆ ವೇಳೆಯಲ್ಲಿ ವೇಳೆ ಆ ವ್ಯಕ್ತಿಗೆ ಸಂಧಿವಾತ (ಆರ್ಥೈಟಿಸ್) ಇರುವುದಾಗಿ ತಿಳಿದುಬಂದಿದ್ದು, ವೈದ್ಯರು ನೀಡಿದ ನೋವು ನಿವಾರಕ ಔಷಧಿಗಳೊಂದಿಗೆ ಮದ್ಯ ಸೇವಿಸಿದ್ದರಿಂದ ಒಂದೇ ಕಡೆ ನಿಂತಿರುವ ಸ್ಥಿತಿಯಲ್ಲಿರುವಂತೆ ವಿಡಿಯೊದಲ್ಲಿ ಕಂಡುಬಂದಿದೆ.
Dr Nagaraj Shenoy Column: ಮಕ್ಕಳು ಡ್ರಗ್ಸ್ ಚಟಕ್ಕೆ ಬಲಿಯಾಗದಂತೆ ತಡೆಯುವುದು ಹೇಗೆ ?
ಆ ವ್ಯಕ್ತಿಯು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಕಳೆದ ಮೂರು ತಿಂಗಳಿನಿಂದ ನಗರದಲ್ಲೇ ವಾಸವಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ. ಇಂತಹ ವಿಷಯಗಳು ಸಾರ್ವಜನಿಕರಲ್ಲಿ ಅನಗತ್ಯ ಭೀತಿಯನ್ನು ಮತ್ತು ಯಾವುದೇ ವ್ಯಕ್ತಿಯ ಪ್ರತಿಷ್ಠೆಗೆ ಹಾನಿವುಂಟು ಮಾಡುವ ಸಂಭವವಿರುವುದರಿಂದ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪರಿಶೀಲಿಸದ ಅಥವಾ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಬೆಂಗಳೂರು ನಗರ ಪೊಲೀಸ್ ವತಿಯಿಂದ ಮನವಿ. ಇಂತಹ ತಪ್ಪು ಮಾಹಿತಿ ಅಥವಾ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ತಿಳಿಸಿದೆ.