ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KPSC Recruitment Scam: ಅಲೋಕ್ ಕುಮಾರ್ ಬಗ್ಗೆ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ; ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು

ಕೆಪಿಎಸ್​ಸಿ ಅಕ್ರಮದ ತನಿಖೆಗೆ ಹೈಕೋರ್ಟ್​ ಎಸ್​ಐಟಿ ರಚನೆ ಮಾಡಿತ್ತು. ಅಲೋಕ್​ ಕುಮಾರ್​ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಆದರೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಅಲೋಕ್‌ ಕುಮಾರ್‌ ಸೇರಿ ಇಬ್ಬರು ಅಧಿಕಾರಿಗಳನ್ನು ಎಸ್‌ಐಟಿಯಿಂದ ಹೊರಗಿಡಲು ಸೂಚನೆ ನೀಡಿತ್ತು.

ಬೆಂಗಳೂರು: ಕೆಪಿಎಸ್​​ಸಿ ಅಕ್ರಮ ತನಿಖೆಗಾಗಿ ರಚಿಸಲಾಗಿರುವ ಎಸ್​ಐಟಿ ತಂಡದಿಂದ ಹಿರಿಯ ಪೊಲೀಸ್​ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಸುಪ್ರೀಂ ಕೋರ್ಟ್​ಗೆ ಅಧಿಕಾರಿ ಬಗ್ಗೆ ರಾಜ್ಯ ಸರ್ಕಾರದಿಂದ ತಪ್ಪು ಮಾಹಿತಿ ನೀಡಲಾಗಿದೆ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಲೊಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಅಪೂರ್ಣ ಮಾಹಿತಿ ನೀಡಲಾಗಿದೆ. 2024 ರಲ್ಲೇ ಸಿಬಿಐ ಈ ಪ್ರಕರಣ ಸಂಬಂಧ ಬಿ ರಿಪೋರ್ಟ್ ಸಲ್ಲಿಸಿದ್ದು ನ್ಯಾಯಾಲಯ ಅಂಗೀಕರಿಸಿದೆ. ಆದರೆ, ಈ ಪ್ರಕರಣದ ತನಿಖೆ ಬಾಕಿ ಇದೆ ಎಂಬ ಅರ್ಥ ಬರುವಂತೆ ಸುಪ್ರೀಂ ಕೋರ್ಟ್​ಗೆ ಮಾಹಿತಿ ಸಲ್ಲಿಸಲಾಗಿದೆ. ಈ ರೀತಿಯ ಮಾಹಿತಿ ಸಲ್ಲಿಸಲು ಕಾರಣೀಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಬೇಕು ಎಂದು ರಾಜ್ಯಪಾಲರನ್ನು ಸಾಮಾಜಿಕ ಕಾರ್ಯಕರ್ತ ಕೋರಿದ್ದಾರೆ.

ಈ ರೀತಿ ತಪ್ಪು ಮಾಹಿತಿ ಅಧಿಕಾರಿಯ ವೃತ್ತಿಪರ ಪ್ರತಿಷ್ಠೆಗೆ ಹಾನಿ ಉಂಟುಮಾಡುತ್ತದೆ. ಸರ್ಕಾರದ ನ್ಯಾಯಾಲಯದ ಸಲ್ಲಿಕೆಗಳ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರುತ್ತದೆ. ಸತ್ಯಾಂಶಗಳ ಪರಿಶೀಲನೆ, ಅಗತ್ಯ ತಿದ್ದುಪಡಿ ಮತ್ತು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಸ್‌ಐಟಿ ತಂಡದಿಂದ ಇಬ್ಬರು ಅಧಿಕಾರಿಗಳು ಹೊರಕ್ಕೆ

ಕೆಪಿಎಸ್​ಸಿ ಅಕ್ರಮದ ತನಿಖೆಗೆ ಹೈಕೋರ್ಟ್​ ಎಸ್​ಐಟಿ ರಚನೆ ಮಾಡಿತ್ತು. ಅಲೋಕ್​ ಕುಮಾರ್​ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಆದರೆ ಸಿಐಡಿ ತನಿಖೆ ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದೆ ಮತ್ತು ಹೊಸದಾಗಿ ಎಸ್‌ಐಟಿ ರಚಿಸಿ ಮರು ತನಿಖೆ ನಡೆಸುವುದರಿಂದ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಕಳೆದ ಮಂಗಳವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಇಬ್ಬರು ಅಧಿಕಾರಿಗಳನ್ನು ಬದಲಾಯಿಸಲು ಸೂಚನೆ ನೀಡಿತ್ತು. ಹೈಕೋರ್ಟ್​​ಗೆ ಪರ್ಯಾಯ ಹೆಸರು ಸೂಚನೆ ಮಾಡಬೇಕು, ಬಳಿಕ ಎರಡು ಕಡೆಯವರಿಗೆ ವಾದ ಮಾಡಲು ಅವಕಾಶ ನೀಡಬೇಕು. ಎರಡು ಕಡೆ ವಾದ ಆಲಿಸಿ‌ ಹೈಕೋರ್ಟ್ ಅಧಿಕಾರಿ ಆಯ್ಕೆ‌ ಮಾಡಬೇಕು. ಅಲ್ಲಿವರೆಗೆ ಸಿಐಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬಾರದು ಎಂದು ಸುಪ್ರೀಂ ಕೋರ್ಟ್​ ಹೇಳಿತ್ತು.

ಇಬ್ಬರು ಅಧಿಕಾರಿಗಳ ಬದಲಾಯಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ, ಅಲೋಕ್​​ ಕುಮಾರ್​, ದಿವ್ಯಾ ಗೋಪಿನಾಥ್ ಹೊರಗಿಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಇದೀಗ ದೂರು ಸಲ್ಲಿಕೆಯಾಗಿದೆ.