ಬೆಂಗಳೂರು, ನ.14: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾಲುಮರದ ತಿಮ್ಮಕ್ಕನವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.
ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅಗಲಿದ ಮಹಾಚೇತನಕ್ಕೆ ನನ್ನ ನಮನಗಳು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಸಿರು ಚೆಲ್ಲಿದ 'ವೃಕ್ಷಮಾತೆ': ಡಿಸಿಎಂ ಡಿ.ಕೆ. ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಮರಗಳನ್ನೇ ತಮ್ಮ ಮಕ್ಕಳಂತೆ ಸಾಕಿ ಸಲಹಿದ ʻವೃಕ್ಷಮಾತೆʼ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ನಿಧನರಾದ ಸುದ್ದಿ ಅತೀವ ದುಖಃ ನೀಡಿದೆ. ನಿಸರ್ಗ ಪ್ರೀತಿಯ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದ ಅವರ ಅಸಾಮಾನ್ಯ ಬದುಕು ಮತ್ತು ಪರಿಸರಕ್ಕೆ ಅವರ ಕೊಡುಗೆ ಚಿರಸ್ಮರಣೀಯ. ವೃಕ್ಷಮಾತೆ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕಾರ್ಯ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ಉಳಿಯಲಿದೆ. ಓಂ ಶಾಂತಿ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Saalumarada Thimmakka Death: ಮರಗಳನ್ನೇ ಮಕ್ಕಳೆಂದು ಪ್ರೀತಿಸಿದ ಸಾಲುಮರದ ತಿಮ್ಮಕ್ಕ
ಪ್ರಕೃತಿಗಾಗಿಯೇ ಬದುಕಿ ಬಾಳಿದವರು: ಎಚ್.ಡಿ.ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಪರಿಸರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟು ಪ್ರಕೃತಿಗಾಗಿಯೇ ಬದುಕಿ ಬಾಳಿದ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ನಾಡಿಗೆ ಅವರು ನೀಡಿರುವ ಕೊಡುಗೆ, ಅವರಿಂದ ದೊರೆತಿರುವ ಪ್ರೇರಣೆ ಅಜರಾಮರ. ಅಗಲಿದ ಆ ಚೇತನಕ್ಕೆ ಚಿರಶಾಂತಿ ದೊರೆಯಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.
ತಿಮ್ಮಕ್ಕ ಅವರ ಕಾರ್ಯ ಸದಾ ಪ್ರೇರಣೆ: ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ವೃಕ್ಷಮಾತೆ ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಸಾವಿರಾರು ಗಿಡಗಳನ್ನು ನೆಟ್ಟು ಮಕ್ಕಳಂತೆ ಸಲುಹಿ ತನ್ನ ಇಡೀ ಜೀವನವನ್ನೇ ಪರಿಸರದ ಉಳುವಿಗಾಗಿ ಮುಡುಪಾಗಿಟ್ಟು ಅವರು ಮಾಡಿರುವ ಪರಿಸರ ಸೇವೆ ಸದಾಕಾಲ ಅವರನ್ನು ಜೀವಂತವಾಗಿಡುತ್ತದೆ. ಅವರ ಸಾಧನೆಗೆ ಪದ್ಮಶ್ರೀ, ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಅವರ ಅಗಲಿಕೆಯಿಂದ ನಾಡು ಹಿರಿಯ ಜೀವವನ್ನು ಕಳೆದುಕೊಂಡು ಬಡವಾದಂತಾಗಿದೆ. ತಿಮ್ಮಕ್ಕ ಅವರ ಕಾರ್ಯ ಸದಾ ಪ್ರೇರಣೆಯಾಗಿದೆ. ದೇವರು ಹಿರಿಯ ಜೀವಕ್ಕೆ ಚಿರ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಎಲ್ಲ ಅವರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಹೇಳಿದ್ದಾರೆ.