ಬೆಂಗಳೂರು, ನ.4: ಬಾಗಲಕೋಟೆ ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ (HY Meti Death) ನಿಧನಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಸಚಿವರು, ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರು, ಹಾಲಿ ಶಾಸಕರೂ ಆದ ಎಚ್.ವೈ.ಮೇಟಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕಳೆದ ಗುರುವಾರವಷ್ಟೇ ಆಸ್ಪತ್ರೆಗೆ ಭೇಟಿನೀಡಿ, ಅವರ ಆರೋಗ್ಯ ವಿಚಾರಿಸಿದ್ದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಶಾಸಕ ಎಚ್.ವೈ. ಮೇಟಿ ಅವರು ಗುಣಮುಖರಾಗಿ ಮತ್ತೆ ನಮ್ಮನ್ನು ಕೂಡಿಕೊಳ್ಳುತ್ತಾರೆ ಎನ್ನುವ ಭರವಸೆಯಿತ್ತು. ನನ್ನ ಭರವಸೆ, ಹಾರೈಕೆಗಳೆರೆಡೂ ಹುಸಿಯಾಗಿದೆ. ಬಹುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿದ್ದ ಮೇಟಿಯವರು ಜನಪರವಾಗಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ ಮುತ್ಸದ್ದಿ ನಾಯಕರು. ಅವರ ನಿಧನದಿಂದ ಸಮಾಜ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಮೇಟಿಯವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಪಕ್ಷಕ್ಕೆ ಭರಿಸಲಾಗದ ನಷ್ಟ: ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದು, ಬಾಗಲಕೋಟೆ ಕಾಂಗ್ರೆಸ್ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಎಚ್.ವೈ ಮೇಟಿ ಅವರು ಅನಾರೋಗ್ಯದಿಂದಾಗಿ ಇಂದು ನಿಧನರಾದ ವಿಷಯ ತಿಳಿದು ಮನಸ್ಸಿಗೆ ನೋವಾಗಿದೆ. ಅವರ ಅಗಲಿಕೆಯಿಂದ ಪಕ್ಷಕ್ಕೆ ಭರಿಸಲಾಗದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | HY Meti death: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ವೈ ಮೇಟಿ ಇನ್ನಿಲ್ಲ
ಮೇಟಿ ನಿಧನ ಸುದ್ದಿ ಕೇಳಿ ದುಖವಾಯಿತು: ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ, ಬಾಗಲಕೋಟೆಯ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾಗಿದ್ದ ಎಚ್. ವೈ. ಮೇಟಿ ಅವರು ಅನಾರೋಗ್ಯದಿಂದ ನಿಧನ ಹೊಂದಿರುವ ಸುದ್ದಿ ಕೇಳಿ ದುಖವಾಯಿತು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ನನಗೆ ಅತ್ಯಂತ ಆತ್ಮೀಯರಾಗಿದ್ದರು. ನನಗೆ ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ದೊರೆತಿತ್ತು. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.