ಬೆಂಗಳೂರು, ಡಿ.29: ಕರ್ನಾಟಕದ ಗೃಹ ಇಲಾಖೆಯನ್ನು ನಡೆಸಲು ಆಗದಿದ್ದರೆ ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ʼಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ ಪೋಸ್ಟರ್ʼ ಅನ್ನು ಅವರು ಬಿಡುಗಡೆಗೊಳಿಸಿ, ಮಾತನಾಡಿದರು.
ಗೃಹ ಸಚಿವರೇ ಸಬೂಬುಗಳನ್ನು ಹೇಳಿಕೊಂಡು ಎಷ್ಟು ದಿನ ಈ ರಾಜ್ಯವನ್ನು ಹಾಳು ಮಾಡುತ್ತೀರಿ? ನೀವು ಅಧಿಕಾರ ಬಿಟ್ಟು ಕೊಡಿ. ಬೇರೆ ಯಾರಿಗಾದರೂ ತಾಕತ್ತಿದ್ದರೆ ಆಡಳಿತ ನಡೆಸಲಿ ಎಂದು ಒತ್ತಾಯಿಸಿದರು. ಡಾ. ಪರಮೇಶ್ವರ್ ಅವರೇ, ಇದು ನಿಮ್ಮ ಅಸಹಾಯಕತೆಯೇ? ಅಥವಾ ಬೇರೆಯವರು ನಿಮಗೆ ಕೆಟ್ಟ ಹೆಸರು ತರಲು ನಿಮ್ಮ ವಿರುದ್ಧವಾಗಿ ಮಾಡಿದ ಷಡ್ಯಂತ್ರವೇ ಎಂದು ಹೇಳಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಮಾಫಿಯಾಕ್ಕೆ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರ್ಕಾರವೇ ಡ್ರಗ್ ಸರ್ಕಾರವಾಗಿದೆ. ಕರ್ನಾಟಕದಲ್ಲಿ ಡ್ರಗ್ ಕಾರ್ಖಾನೆ ತಲೆ ಎತ್ತಿರುವುದು ಹೊರಕ್ಕೆ ಬರುತ್ತಿದೆ ಎಂದು ಆರೋಪಿಸಿದರು.
ಸರ್ಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ ಎಂದು ಅನುಮಾನ ಬರುತ್ತಿದೆ. ಡ್ರಗ್ ಪೆಡ್ಲರ್‌ಗಳನ್ನು ನಮ್ಮ ಸರ್ಕಾರ ಹಿಡಿಯುವುದಿಲ್ಲ. ಮೈಸೂರು, ಬೆಂಗಳೂರಿನ 3 ಕಡೆ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರದ ಪೊಲೀಸರು ದಾಳಿ ಮಾಡಬೇಕಾಯಿತು ಎಂದು ಛಲವಾದಿ ನಾರಾಯಣಸ್ವಾಮಿ ದೂರಿದರು. ರಾಜ್ಯದ ಗೃಹ ಇಲಾಖೆ ಸತ್ತು ಹೋಗಿದೆಯೇ? ಬೇಹುಗಾರಿಕಾ ದಳ, ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮಹಾರಾಷ್ಟ್ರ ಪೊಲೀಸರು ಇದನ್ನು ಪತ್ತೆ ಹಚ್ಚಿದ ಬಳಿಕ ಇಲ್ಲಿನ ಕಾಂಗ್ರೆಸ್ ಸರ್ಕಾರ ನಾವು ಹಿಡಿದಿದ್ದೇವೆ ಎಂದು ತಿಳಿಸಿ, ಘನ ಕಾರ್ಯ ಮಾಡಿದಂತೆ ವರ್ತಿಸುತ್ತದೆ ಎಂದು ಆರೋಪಿಸಿದರು.
ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರ್ಕಾರದ ಕುಮ್ಮಕ್ಕು
ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರ್ಕಾರದ ಕುಮ್ಮಕ್ಕಿದೆ. ಗಂಧದ ನಾಡು ಗಾಂಜಾ ಬೀಡಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕೇ ಬೇಡವೇ ಎಂಬ ಪರಿಸ್ಥಿತಿ ಬಂದಿದೆ. ಆ್ಯಂಟಿ ನಕ್ಸಲ್ ದಳದ ಕೆಲಸ ಮುಗಿದು ಹೋಗಿದೆ. ಅದನ್ನು ಆ್ಯಂಟಿ ಡ್ರಗ್ಸ್ ದಳವಾಗಿ ಮಾಡಿ ಮಾದಕವಸ್ತು ಜಾಲದ ಸಂಪೂರ್ಣ ಮೂಲೋತ್ಪಾಟನೆ ಮಾಡಿ ಎಂದು ಒತ್ತಾಯಿಸಿದರು. ಒಟ್ಟಾರೆ ಕಾಂಗ್ರೆಸ್ ಸರ್ಕಾರವು ಈ ರಾಜ್ಯವನ್ನು ಸಂಪೂರ್ಣ ಹದಗೆಡಿಸಿದೆ ಎಂದು ಆಕ್ಷೇಪಿಸಿದ ಅವರು, ಮುಖ್ಯಮಂತ್ರಿಗಳು ತಕ್ಷಣ ಕಾರ್ಯೋನ್ಮುಖವಾಗಲಿ. ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ರಾಜೀನಾಮೆ ಕೊಡಬೇಕೇ ಎಂದು ಅವರೇ ತೀರ್ಮಾನಿಸಲಿ ಎಂದು ತಿಳಿಸಿದರು.
ರಾಜ್ಯದ ಜನರು ತಲೆ ಬಗ್ಗಿಸುವಂತೆ ಮಾಡದಿರಿ
ಬೆಂಗಳೂರಿನ ಕೋಗಿಲು ಲೇಔಟ್‍ನಲ್ಲಿ ಬೇರೆಯವರ ಜಾಗದಲ್ಲಿ ಗುಡಿಸಲು ಹಾಕಿದವರನ್ನು ಬುಲ್‍ಡೋಜರ್ ತೆರವುಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಿದೆ. ಈಗ ಕೇರಳದ ಮುಖ್ಯಮಂತ್ರಿಗಳು ಬುಲ್‍ಡೋಜರ್ ಸಂಸ್ಕೃತಿಯ ಮಾತನಾಡಿದ್ದಾರೆ. ಈಗ ಕೃಷ್ಣಬೈರೇಗೌಡರು, ಅನುಮತಿ ನೀಡಿದ್ದ ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಇಲ್ಲಿನ ಸರ್ಕಾರ ಅತ್ಯಂತ ದುರ್ಬಲವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ನೀವು ವೇಣುಗೋಪಾಲ್ ಅಥವಾ ಪಿಣರಾಯಿ ವಿಜಯನ್ ಸರ್ಕಾರದ ಗುಲಾಮರಾದರೂ ಆಗಿರಿ; ನನ್ನ ರಾಜ್ಯದ ಜನರನ್ನು ಇನ್ನೊಬ್ಬರ ಮುಂದೆ ತಲೆ ಬಗ್ಗಿಸುವಂತೆ ಮಾಡದಿರಿ ಎಂದು ಎಚ್ಚರಿಸಿದರು. ಕೋಗಿಲು ಗುಡಿಸಲು ಕಳಕೊಂಡವರಿಗೆ ಕಾನೂನುಬಾಹಿರವಾಗಿ ಮನೆ ಕೊಟ್ಟರೆ ಇಡೀ ರಾಜ್ಯದಲ್ಲಿ ಈ ರೀತಿ ವಸತಿಹೀನರಾದವರಿಗೆ ಮನೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ಯಾರಂಟಿಗಳಿಗೆ ಇದುವರೆಗೆ ದಲಿತರ 39 ಸಾವಿರ ಕೋಟಿ ರೂ. ಬಳಕೆ: ಛಲವಾದಿ ನಾರಾಯಣಸ್ವಾಮಿ ಆರೋಪ
ಹೆಬ್ಬಾಳ ಬ್ರಿಡ್ಜ್ ಪಕ್ಕದಲ್ಲಿ 200 ಗುಡಿಸಲುಗಳಿದ್ದು, ಅಲ್ಲಿ ಗಾಂಜಾ, ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ತಿಳಿಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಅವರಲ್ಲಿ ಮತದಾರರ ಚೀಟಿ, ರೇಷನ್ ಕಾರ್ಡಿದೆ. ಓಲೈಕೆ, ಮತಬ್ಯಾಂಕಿಗಾಗಿ ಸ್ಲಂ ನಿರ್ಮಾಣಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬಿಜೆಪಿ ಮುಖಂಡ ಆರ್. ರುದ್ರಯ್ಯ ಉಪಸ್ಥಿತರಿದ್ದರು.